ಬೆಂಗಳೂರು: ಕರುನಾಡ ಕ್ರೀಡಾಭಿಮಾನಿಗಳು ಎಂದು ಮರೆಯಲಾಗದ ದುರಂತಕ್ಕೆ 1 ವರ್ಷ ತುಂಬಿದೆ, ಚೊಚ್ಚಲ ಐಪಿಎಲ್ ಕಪ್ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಅಭಿನಂದಿಸುವ ಸಂಭ್ರಮದ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಯುವಕರು ಪ್ರಾಣ ಕಳೆದುಕೊಂಡರು, ಈ ಘಟನೆಗೆ ಕಾರಣರಾದವರ್ಯಾರು, ತನಿಖೆ ಎಲ್ಲಿಗೆ ಬಂದು ನಿಂತಿದೆ ನೋಡೋಣ ಬನ್ನಿ.
ಆರ್‌ಸಿಬಿ ಇಂದು 2ನೇ ಕಪ್ ಗೆದ್ದ ಸಂಭ್ರಮದಲ್ಲಿದೆ, ಆರ್‌ಸಿಬಿ ಅಭಿಮಾನಿಗಳು ಕೂಡ ಹಳೆಯ ಕಹಿ ನೆನಪನ್ನ ಮರೆತು, ತಮ್ಮ ನೆಚ್ಚಿನ ತಂಡದ ಗೆಲುವಿನಲ್ಲಿ ಪಾಲುದಾರರಾಗಿ ಸಂಭ್ರಮಿಸುತ್ತಿದ್ದಾರೆ. ಆದರೆ ಈ ದುರಂತದಲ್ಲಿ ತಮ್ಮ ಮಕ್ಕಳನ್ನ ಕಳೆದುಕೊಂಡ ಕುಟುಂಬಸ್ಥರ ಸ್ಮೃತಿಪಟಲದಲ್ಲಿ ಈ ದುರಂತ ಇನ್ನೂ ಮರೆಯಾಗಿಲ್ಲ. ಈಗಾಗಲೇ ಈ ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಮೊದಲ ಹಂತದ ಆರೋಪ ಪಟ್ಟಿಯನ್ನು ಸಿಐಡಿ ಸಲ್ಲಿಸಿದೆ. ಇಷ್ಟಾದರೂ ಘಟನೆ ನಡೆದು ವರ್ಷ ಕಳೆದರೂ ದುರ್ಘಟನೆಯ ಹೊಣೆಗಾರರು ಮಾತ್ರ ಇನ್ನೂ ಪತ್ತೆಯಾಗಿಲ್ಲ.
ದುರಂತದ ಹೊಣೆ ಯಾರ ಹೆಗಲಿಗೆ..!
2025ರ ಜೂನ್ 3 ರಂದು ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಿತು. ಅಭಿಮಾನಿಗಳ 18 ವರ್ಷಗಳ ಕಾಯುವಿಕೆ ಕೊನೆಗೂ ಮುಕ್ತಾಯವಾಗಿತ್ತು, ಇದರ ನಡುವೆ ಆರ್‌ಸಿಬಿ ತಂಡ ಕಪ್ ಗೆದ್ದ ಮಾರನೇ ದಿನವೇ ಬೆಂಗಳೂರಿಗೆ ಆಗಮಿಸಿ, ವಿಜಯೋತ್ಸವ ಮೆರವಣಿಗೆ ನಡೆಸುವುದಾಗಿ ಘೋಷಿಸಿತು. ರಾಜ್ಯ ಸರ್ಕಾರ ಕೂಡ ಆರ್‌ಸಿಬಿ ತಂಡವನ್ನ ಭವ್ಯ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಭಿನಂದಿಸುತ್ತೇವೆ ಎಂದು ನಗಾರಿ ಮೊಳಗಿಸಿತ್ತು, ಆದರೆ ಇವರ್ಯಾರು ಕೂಡ ಪೊಲೀಸ್ ಇಲಾಖೆ ನೀಡಿದ ಕೆಂಪು ಸಿಗ್ನಲ್ ಕಡೆಗೆ ಗಮನ ಹರಿಸಲೇ ಇಲ್ಲ.
ಪೊಲೀಸರು ಕಾರ್ಯಕ್ರಮ ಆಯೋಜನೆಗೆ ಸ್ವಲ್ಪ ಸಮಯ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು, ರಾತ್ರಿಯಿಡಿ ಅಭಿಮಾನಿಗಳನ್ನ ಪೊಲೀಸರು ನಿಯಂತ್ರಿಸಿದ್ದಾರೆ, ಈಗ ಕೂಡಲೇ ಕಾರ್ಯಕ್ರಮ ಆಯೋಜಿಸಿದರೆ ದುರಂತಕ್ಕೆ ಮುನ್ನಡಿ ಬರೆಯಬಹುದು ಎಂಬ ವಾರ್ನಿಂಗ್ ಕೂಡ ಕೊಟ್ಟಿದ್ದರು, ಆದರೆ ಅಂದಿನ ಸರ್ಕಾರವಾಗಲಿ ಅಥವಾ ಆರ್‌ಸಿಬಿ ಮ್ಯಾನೆಜ್‌ಮೆಂಟ್ ಆಗಲಿ ಇದ್ಯಾವುದನ್ನ ತಲೆಗೆ ಹಾಕಿ ಕೊಂಡಿರಲಿಲ್ಲ, ಅಂದಿನ ಉಪ ಮುಖ್ಯಮಂತ್ರಿ (ಈಗ ಮುಖ್ಯಮಂತ್ರಿ) ಡಿಕೆ ಶಿವಕುಮಾರ್ ಬಾವುಟ ಹಿಡಿದುಕೊಂಡು ಆರ್‌ಸಿಬಿ ಆಟಗಾರರನ್ನ ಬೆಂಗಳೂರಿಗೆ ಸ್ವಾಗತಿಸಿ, ರಸ್ತೆಯಲ್ಲಿ ಅಭಿಮಾನಿಗಳ ಮುಂದೆ ಪೋಸ್ ಕೊಟ್ಟಿದ್ದರು. ಇದೇ ವೇಳೆಯಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಅತಿ ದೊಡ್ಡ ತಪ್ಪು ಮಾಡಿಬಿಟ್ಟಿತ್ತು, ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ಅಭಿಮಾನಿಗಳಿಗೆ ಉಚಿತ ಎಂಟ್ರಿ ನೀಡಲಾಗುತ್ತೇ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿತ್ತು.
ಸಂಜೆ ವೇಳೆಗೆ ವಿಧಾನಸೌಧದಲ್ಲಿ ಆಟಗಾರರನ್ನ ರಾಜ್ಯ ಸರ್ಕಾರ ಸನ್ಮಾನಿಸಿ, ಅವರನ್ನ ಚಿನ್ನಸ್ವಾಮಿ ಕ್ರೀಡಾಂಗಣದ ಕಡೆಗೆ ಕಳಿಸಿಕೊಟ್ಟಿತ್ತು, ಒಮ್ಮೆಲೆ ಅಭಿಮಾನಿಗಳ ದಂಡು ಕ್ರೀಡಾಂಗಣದ ಕಡೆಗೆ ಪ್ರವಾಹೋಪಾಧಿಯಲ್ಲಿ ಆಗಮಿಸಿತು, ಆಗ ನಡೆಯಿತು ದುರಂತ, ಕ್ರೀಡಾಂಗಣದ ಒಳಗೆ ನುಗ್ಗಲು ಯತ್ನಿಸುವ ವೇಳೆ ನೂಕು ನುಗ್ಗಲು ಸಂಭವಿಸಿ 11 ಅಭಿಮಾನಿಗಳು ಉಸಿರು ಚೆಲ್ಲಿದರು, ಸುಮಾರು 33 ಜನರ ಗಾಯಗೊಂಡರು, ಇದರ ನಡುವೆಯೂ ಆರ್‌ಸಿಬಿ ಕ್ರೀಡಾಂಗಣದ ಒಳಗೆ ತಮ್ಮ ಗೆಲುವನ್ನ ನೆರೆದಿದ್ದ ಅಭಿಮಾನಿಗಳ ಮುಂದೆ ಹಂಚಿಕೊಂಡಿತ್ತು, ಸ್ವತಃ ಡಿಕೆ ಶಿವಕುಮಾರ್ ಅವರು ಒಳಗೆ ಹೋಗಿ ಕಪ್ ಎತ್ತಿ ಸಂಭ್ರಮಿಸಿದ್ದರು.
11 ಜನರ ಸಾವಿಗೆ ಕೈಗೊಂಡ ಕ್ರಮ ಏನು..!
ಕಾಲ್ತುಳಿತ ಸಂಬಂಧ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣವೂ ದಾಖಲಾಯಿತು. ಕಾರ್ಯಕ್ರಮ ಆಯೋಜಕ ಕಂಪನಿಯ ಐವರನ್ನು ಪೊಲೀಸರು ಬಂಧಿಸಿದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಅವರು ಹೊರಬಂದರು. ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತು.
ಆಯುಕ್ತರು ಸೇರಿ ಐವರು ಪೊಲೀಸರ ತಲೆದಂಡ..!
ಕಾಲ್ತುಳಿತ ದುರಂತ ಸಂಬಂಧ ಅಂದಿನ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್ , ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ. ಶೇಖರ್, ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಗಿರೀಶ್ ಅವರನ್ನು ಸರ್ಕಾರ ಅಮಾನತುಗೊಳಿಸಿತು. ರಾಜ್ಯ ಪೊಲೀಸ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬೆಂಗಳೂರು ಆಯುಕ್ತರು ಅಮಾನತುಗೊಂಡಿದ್ದು ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿತು. ಎಂಟು ತಿಂಗಳ ಬಳಿಕ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಲಾಯಿತು.
ನ್ಯಾಯಾಂಗ ತನಿಖೆ ರಚಿಸಿದ ಸರ್ಕಾರ
ಕಾಲ್ತುಳಿತ ಘಟನೆಗೆ ಹೈಕೋರ್ಟ್ ನಿವೃತ್ತ ನ್ಯಾ.ಮೈಕಲ್ ಡಿ.ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ತನಿಖಾ ಆಯೋಗವನ್ನು ಸರ್ಕಾರ ರಚಿಸಿತು. ಈ ಸಮಿತಿ ವರದಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಐಪಿಎಲ್ ಪಂದ್ಯಾವಳಿ ನಡೆಸಲು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸರ್ಕಾರ ಒಪ್ಪಿಗೆ ನೀಡಿತು. ಈ ವರದಿಯಂತೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ಆಯೋಜನೆಗೊಂಡವು, ಯಾವುದೇ ಗೊಂದಲವಿಲ್ಲದೆ ಮುಕ್ತಾಯಗೊಂಡಿವೆ. ಆದರೆ ಮೃತರ ಮನೆಯ ಶೋಕ.. ಇನ್ನು ಕೊನೆಗೊಂಡಿಲ್ಲ. 11 ಜನ ಯುವಕರು ಇನ್ನೆಂದು ಮರಳಿ ಬರುವುದಿಲ್ಲ. 11 ಜನರ ಸಾವಿಗೆ ಯಾರು ಹೊಣೆಗಾರರಾಗಿಯೂ ಇಲ್ಲ, ಅಪರಾಧಿಗಳಿಗೆ ಶಿಕ್ಷೆಯಾಗುವುದು ಇಲ್ಲ.