ಕಠ್ಮಂಡು: ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಪರಿಣಾಮ ನಾಪತ್ತೆಯಾಗಿರುವ ಸಾವಿರಾರು ಜನರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 939ಕ್ಕೆ ಏರಿಕೆಯಾಗಿದ್ದು, 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
ಈ ನಡುವೆ, ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ನುವಾಕೋಟ್ ಜಿಲ್ಲೆಯ ಬಿಡೂರ್ ಪುರಸಭೆ ವ್ಯಾಪ್ತಿಯ ಬೆಟ್ರಾವತಿ ಗ್ರಾಮದಲ್ಲಿ ಒಂದೇ ಮನೆಯಿಂದ 23 ಮೃತದೇಹಗಳು ಪತ್ತೆಯಾಗಿದ್ದು, ದುರಂತದ ಭೀಕರತೆಯನ್ನು ಮತ್ತೊಮ್ಮೆ ಬಯಲು ಮಾಡಿದೆ.
ಭೋಟೇಕೋಶಿ ನದಿಯ ಉಕ್ಕಿ ಹರಿದ ನೀರಿನೊಂದಿಗೆ ಅಪಾರ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ಹರಿದುಬಂದ ಪರಿಣಾಮ ಮೂರು ಅಂತಸ್ತಿನ ಮನೆಯೊಂದು ಸಂಪೂರ್ಣವಾಗಿ ಹೂತುಹೋಗಿತ್ತು. ಶೋಧ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ ಮನೆಯೊಳಗಿನ ಒಂದೇ ಕೊಠಡಿಯಿಂದ 21 ಮೃತದೇಹಗಳನ್ನು ಪತ್ತೆಹಚ್ಚಿದ್ದು, ಮನೆಯ ಹೊರಭಾಗದಲ್ಲಿ ಇನ್ನೆರಡು ಮೃತದೇಹಗಳು ದೊರೆತಿವೆ. ಪತ್ತೆಯಾದ ಮೃತದೇಹಗಳು ಜನಪ್ರಿಯ ಧಾರ್ಮಿಕ ಕ್ಷೇತ್ರ ಗೋಸೈಕುಂಡಕ್ಕೆ ತೆರಳುತ್ತಿದ್ದ ಯಾತ್ರಿಕರದ್ದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಮನೆಯ ಮೇಲ್ಭಾಗದ ಸಮೀಪವಿದ್ದ ಕೊಠಡಿಯಲ್ಲಿ 21 ಮೃತದೇಹಗಳು ಪತ್ತೆಯಾಗಿವೆ. ಆಗಸ್ಟ್ 26ರಂದು ಭೋಟೇಕೋಶಿ ಮತ್ತು ತ್ರಿಶೂಲಿ ನದಿ ವ್ಯವಸ್ಥೆಗಳಲ್ಲಿ ಉಂಟಾದ ಭೀಕರ ಪ್ರವಾಹ ಈ ಕಟ್ಟಡವನ್ನು ಸಂಪೂರ್ಣವಾಗಿ ಆವರಿಸಿತ್ತು. ಪ್ರವಾಹದ ನೀರಿನ ಮಟ್ಟ ಏರಿದಾಗ, ಕೆಳಭಾಗದಿಂದ ತಪ್ಪಿಸಿಕೊಳ್ಳಲು ಜನರು ಮನೆಯ ಮೇಲಂತಸ್ತುಗಳಿಗೆ ತೆರಳಿರಬಹುದು. ಆದರೆ, ಪ್ರವಾಹದ ತೀವ್ರತೆಯಿಂದ ಹೊರಬರಲು ಸಾಧ್ಯವಾಗದೆ ಮನೆಯೊಳಗೇ ಸಿಲುಕಿ ಸಾವನ್ನಪ್ಪಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಬದುಕುಳಿಯುವ ಉದ್ದೇಶದಿಂದ ಆಶ್ರಯ ಪಡೆದಿದ್ದ ಮನೆಯೇ ಅವರ ಪಾಲಿಗೆ ಸಾವಿನ ಬಲೆಯಾಗಿ ಪರಿಣಮಿಸಿರಬಹುದು ಎಂದು ಶಂಕಿಸಲಾಗಿದೆ.
ಪತ್ತೆಯಾದ ಒಟ್ಟು 23 ಮೃತದೇಹಗಳ ಪೈಕಿ 8 ಮೃತದೇಹಗಳನ್ನು ತ್ರಿಶೂಲಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಮೃತದೇಹಗಳನ್ನು ತಾತ್ಕಾಲಿಕವಾಗಿ ಮನೆಯ ಮೇಲ್ಭಾಗದಲ್ಲಿ ಇರಿಸಲಾಗಿದ್ದು, ಮುಂದಿನ ಹಂತದಲ್ಲಿ ಅವುಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದಲ್ಲಿ ಪ್ರವಾಹದ ಬಳಿಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ನಾಪತ್ತೆಯಾಗಿರುವ ಸಾವಿರಾರು ಜನರ ಪತ್ತೆಗಾಗಿ ರಕ್ಷಣಾ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.