ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಕೊಲ್ಕತ್ತಾದಲ್ಲಿ ನಡೆದ ಭೀಕರ ಅಗ್ನಿ (Fire) ಅವಘಡದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಸುಮಾರು 4,000 ಇವಿಎಂ (EVM) ಮತಯಂತ್ರಗಳು ಸುಟ್ಟು ಭಸ್ಮವಾಗಿವೆ. ದಕ್ಷಿಣ 24 ಪರಗಣದ ಜಿಲ್ಲಾ ಪರಿಷದ್ ಆಡಳಿತ ಕಟ್ಟಡದಲ್ಲಿ ಜೂನ್ 10ರಂದು ಬುಧವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಇದೀಗ ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ
ಈ ದುರ್ಘಟನೆಯಲ್ಲಿ ಕಟ್ಟಡದ 8 ಮತ್ತು 9ನೇ ಮಹಡಿಗಳಲ್ಲಿ ಇರಿಸಲಾಗಿದ್ದ ಸುಮಾರು 4,000 ಇವಿಎಂಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಇವಿಎಂ ಯಂತ್ರಗಳನ್ನು ಇತ್ತೀಚೆಗೆ ನಡೆದ ರಾಜ್ಯದ 10 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಬಳಸಲಾಗಿತ್ತು. ಇವಿಎಂಗಳ ಜೊತೆಗೆ ಶಾಲಾ ಮಧ್ಯಾಹ್ನದ ಬಿಸಿಊಟದ ಯೋಜನೆಗೆ ಸಂಬಂಧಿಸಿದ ಕಡತಗಳು ಸೇರಿದಂತೆ ಹಲವು ಪ್ರಮುಖ ಸರ್ಕಾರಿ ದಾಖಲೆಗಳು ಸಹ ಬೆಂಕಿಗೆ ಆಹುತಿಯಾಗಿವೆ.
ಹಲವು ಅನುಮಾನಗಳ ಹುತ್ತ...!
ಇನ್ನು ಬೆಂಕಿ ಅವಘಡದ ಬಗ್ಗೆ ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಕೌಶಿಕ್ ಚೌಧರಿ ಅವರು ಪ್ರತಿಕ್ರಿಯೆ ನೀಡಿದ್ದು, "ಇದು ಸಾಮಾನ್ಯ ಅಗ್ನಿ ಅವಘಡದಂತೆ ಕಾಣಿಸುತ್ತಿಲ್ಲ ಎಂದು ಶಂಕಿಸಿದ್ದಾರೆ. ಘಟನೆಯ ನಿಖರ ಕಾರಣ ತಿಳಿಯಲು ನಾವು ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದೇವೆ, ಕಟ್ಟಡದ 2 ಮತ್ತು 3ನೇ ಮಹಡಿಗಳಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು.ಆದರೆ ಮಧ್ಯದಲ್ಲಿದ್ದ 4, 5 ಮತ್ತು 6ನೇ ಮಹಡಿಗಳಿಗೆ ಯಾವುದೇ ಹಾನಿ ಮಾಡದೆ, ಬೆಂಕಿಯು ನೇರವಾಗಿ ಮೇಲಿರುವ 7, 8 ಮತ್ತು 9ನೇ ಮಹಡಿಗಳಿಗೆ ಹೇಗೆ ವ್ಯಾಪಿಸಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದು ನಮಗೆ ದೊಡ್ಡ ಆಶ್ಚರ್ಯ ತಂದಿದೆ ಕೌಶಿಕ್ ಚೌಧರಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಅಲಿಪೋರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ಮತ್ತು ವಿಧಿವಿಜ್ಞಾನ (Forensic) ತಜ್ಞರ ತಂಡವು ವಿಧ್ವಂಸಕ ಕೃತ್ಯ ಅಥವಾ ಪಿತೂರಿ ನಡೆದಿದೆಯೇ ಎಂಬ ಕೋನದಲ್ಲಿ ತನಿಖೆ ಆರಂಭಿಸಿದೆ. ಶಾರ್ಟ್ ಸರ್ಕ್ಯೂಟ್ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂದು ತಿಳಿಯಲು ಮಾದರಿಗಳನ್ನು ಸಂಗ್ರಹಿಸಲಾಗಿದೆ.