ಕರ್ನಾಟಕದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಈ ಬಾರಿ ಭಾರೀ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯ ಪೊಲೀಸ್ ಇಲಾಖೆಯ 3,991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಒಟ್ಟು 4,54,536 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಒಂದು ಹುದ್ದೆಗೆ ಸರಾಸರಿ 114ಕ್ಕೂ ಹೆಚ್ಚು ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ.
ಆಗಸ್ಟ್ 2ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಲಿಖಿತ ಪರೀಕ್ಷೆ ನಡೆಸಲಿದ್ದು, ಪರೀಕ್ಷೆಗಾಗಿ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕೇತರ (NKK) ವಿಭಾಗದಲ್ಲಿ 3,77,861 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ (HK) ವಿಭಾಗದಲ್ಲಿ 76,675 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ನೇಮಕಾತಿಯಲ್ಲಿ 3,395 ಹುದ್ದೆಗಳು NKK ಪ್ರದೇಶಕ್ಕೆ ಮತ್ತು 596 ಹುದ್ದೆಗಳು HK ಪ್ರದೇಶಕ್ಕೆ ಮೀಸಲಾಗಿವೆ. ಪರೀಕ್ಷೆಯು ಪಾರದರ್ಶಕ ಹಾಗೂ ಸುಗಮವಾಗಿ ನಡೆಯುವಂತೆ ಅಗತ್ಯ ಭದ್ರತಾ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
PHD ಮಾಡಿ ಪೊಲೀಸ್ ಕಾನ್ಸ್‌ಟೇಬಲ್ ಆಗೋಕೆ ಯತ್ನ
ಪಿಯುಸಿ ಕನಿಷ್ಠ ವಿದ್ಯಾರ್ಹತೆಯಾಗಿದ್ದರೂ, ಪದವೀಧರರು, ಸ್ನಾತಕೋತ್ತರ ಪದವೀಧರರು, ಎಂಜಿನಿಯರ್‌ಗಳು ಹಾಗೂ ಪಿಎಚ್‌ಡಿ ಪದವೀಧರರೂ ಅರ್ಜಿ ಸಲ್ಲಿಸಿರುವುದು ಗಮನಾರ್ಹ. ಸರ್ಕಾರಿ ಉದ್ಯೋಗದ ಮೇಲಿನ ಯುವಕರ ಆಸಕ್ತಿ ಹಾಗೂ ಖಾಸಗಿ ಕ್ಷೇತ್ರದಲ್ಲಿನ ಉದ್ಯೋಗ ಸವಾಲುಗಳು ಈ ಭಾರೀ ಪೈಪೋಟಿಗೆ ಪ್ರಮುಖ ಕಾರಣಗಳಾಗಿವೆ.
ಇದರ ಜೊತೆಗೆ KSRP, KSISF, CAR ಹಾಗೂ DAR ಸೇರಿ ಮತ್ತಷ್ಟು 3,934 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ನಡೆಯುತ್ತಿದ್ದು, ಒಟ್ಟಾರೆ ರಾಜ್ಯದಲ್ಲಿ 7,925 ಪೊಲೀಸ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಿದೆ