ಆಂದ್ರ ಪ್ರದೇಶ : ನೆರೆಯ ರಾಜ್ಯ ಆಂದ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜ್ಯದ ಜನರಿಗೆ ಬಂಪರ್ ಘೋಷಣೆಯೊಂದನ್ನ ಮಾಡಿದ್ದಾರೆ. ಇನ್ಮುಂದೆ ಆಂದ್ರದಲ್ಲಿ ಎರಡಕ್ಕಿಂತ ಹೆಚ್ಚು ಅಂದರೆ 3 ಮಕ್ಕಳನ್ನು ಹೆರುವ ಕುಟುಂಬಕ್ಕೆ 30 ಸಾವಿರ ಮತ್ತು 4 ಮಕ್ಕಳನ್ನ ಹೆರುವ ಕುಟುಂಬಕ್ಕೆ 40 ಸಾವಿರ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದ್ದಾರೆ.
ಆಂದ್ರದ ನರಸನ್ನಪೇಟೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯ್ಡು "ರಾಜ್ಯದಲ್ಲಿ ಜನಸಂಖ್ಯೆ ಇಳಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಕ್ಕಳನ್ನು ಹೊರಯಾಗಿ ನೋಡುವ ಬದಲು, ದೇಶದ ಸಂಪತ್ತಾಗಿ ನೋಡಬೇಕು. ಈ ಘೋಷಣೆ ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸುವ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿದೆ ಎಂದು ಅವರು ಹೇಳಿದರು.
ಮುಂದುವರಿದು ಮಾತನಾಡಿದ ನಾಯ್ಡು "ನಾನು ಕುಟುಂಬ ಯೋಜನೆಗಾಗಿ ಕೆಲಸ ಮಾಡಿದ್ದೇನೆ. ಆದರೆ ಇಂದು ಮತ್ತೊಮ್ಮೆ, ಮಕ್ಕಳು ನಮ್ಮ ಸಂಪತ್ತು, ನಾವೆಲ್ಲರೂ ನಮ್ಮ ಮಕ್ಕಳ ಹಿತದೃಷ್ಟಿಯಿಂದ ಕೆಲಸ ಮಾಡುವ ಅವಶ್ಯಕತೆಯಿದೆ. ಅದಕ್ಕಾಗಿಯೇ ನಾನು ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಮೂರನೇ ಮಗು ಹುಟ್ಟಿದ ತಕ್ಷಣ 30,000 ರೂ. ನೀಡುತ್ತೇವೆ. ನಾಲ್ಕನೇ ಮಗುವಿಗೆ ನಾವು 40,000 ರೂ. ನೀಡುತ್ತೇವೆ" ಎಂದು ಹೇಳಿದರು.
ಆಂಧ್ರಪ್ರದೇಶವು ಸುಮಾರು 5.37 ಕೋಟಿಯಿಂದ 5.40 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಇದು ಭಾರತದಲ್ಲಿ ಹತ್ತನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಇದು ದೇಶದ ಒಟ್ಟು ಜನಸಂಖ್ಯೆಯ ಸುಮಾರು 3.76 ಪ್ರತಿಶತವನ್ನು ಹೊಂದಿದೆ.