ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ತನ್ನೆಲ್ಲಾ ಅಭ್ಯರ್ಥಿಗಳನ್ನ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವಲ್ಲಿ ಸಫಲವಾಗಿದ್ದು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಮತ್ತು ಜೆಡಿಎಸ್ ಅಭ್ಯರ್ಥಿ ಹೀನಾಯವಾಗಿ ಸೋಲು ಕಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ನಿಂದ ಅಡ್ಡ ಮತದಾನವಾಗಿದ್ದು, ಇದರಿಂದಾಗಿ ಕಾಂಗ್ರೆಸ್ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆದ್ದು ಬೀಗಿದ್ದಾರೆ.
ಕಾಂಗ್ರೆಸ್ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ಗೆ 32 ಮತಗಳು ಬಂದಿದ್ದರೆ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಪರ ಕೇವಲ 14 ಮತಗಳು ಬಿದ್ದಿವೆ. ಈ ಮೂಲಕ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ 11 ಹೆಚ್ಚುವರಿ ಮತಗಳು ದೊರೆತಿವೆ. ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ಹೊರತುಪಡಿಸಿ ಬಿಜೆಪಿಯ 3 ಮತ್ತು ಜೆಡಿಎಸ್ನ 6 ಶಾಸಕರಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾವಣೆಗೊಂಡಿದೆ.
ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ ಗೆಲ್ಲಲು 27.63 ಮತ ಪಡೆಯಬೇಕು. ಆದರೆ ಲಿಂಗರಾಜ ಪಾಟೀಲ್ಗೆ ಕೇವಲ 27 ಮತಗಳು ಸಿಕ್ಕಿದ್ದವು. ಜೆಡಿಎಸ್ನ ಗೋವಿಂದರಾಜು 14 ಮತ ಪಡೆದಿದ್ದ ಹಿನ್ನೆಲೆ ಎಲಿಮಿನೇಷನ್ ರೌಂಡ್ನಲ್ಲಿ ಲಿಂಗರಾಜ್ ಪಾಟೀಲ್ಗೆ ಜಯ ಸಿಕ್ಕಿದೆ.
ಇನ್ನು ಚುನಾವಣೆಯಲ್ಲಿ ಚಲಾವಣೆಗೊಂಡಿದ್ದ 222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದೆ. ನಂಬರ್ ಸರಿಯಾಗಿ ಬರೆಯದಿದ್ದಕ್ಕೆ 1 ಮತವನ್ನು ತಿರಸ್ಕರಿಸಲಾಗಿದೆ. ಒಂದು ವೇಳೆ ಆ ಒಂದು ತಿರಸ್ಕೃತವಾಗಿಲ್ಲದಿದ್ದರೆ, ಬಿಜೆಪಿಯ ಓರ್ವ ಅಭ್ಯರ್ಥಿ ಸೋಲು ಕಾಣುವ ಸಾಧ್ಯತೆ ಇತ್ತು.