ಭುವನೇಶ್ವರ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ 5 ಒರಾಂಗುಟಾನ್ ಮರಿಗಳು ಪತ್ತೆಯಾಗಿದ್ದು, ಎಲ್ಲಾ 5 ಮರಿಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ, ರಕ್ಷಿಸಲಾದ ಐದು ಮರಿಗಳ ಪೈಕಿ 3 ಗಂಡು ಮರಿಗಳಾಗಿದ್ದು 2 ಹೆಣ್ಣು ಮರಿಗಳು ಎಂದು ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಚಂದ್ರ ಗೋಗಿನೇನಿ ತಿಳಿಸಿದ್ದಾರೆ.
ಉದಯಪುರ–ತಲಸಾರಿ ಅರಣ್ಯ ಪ್ರದೇಶದ ಕ್ಯಾಸುರಿನಾ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ತಿರುಗುವ ವೇಳೆ ತಾಯಿಯಿಂದ ಬೇರ್ಪಟ್ಟ ಒರಾಂಗುಟಾನ್ ಮರಿಗಳು ಪತ್ತೆಯಾಗಿವೆ. ಆರು ತಿಂಗಳಿಂದ ಒಂದು ವರ್ಷದೊಳಗಿನ ಈ ಒರಾಂಗುಟಾನ್ ಮರಿಗಳನ್ನು ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಭುವನೇಶ್ವರದ ನಂದನಕಾನನ್ ಪ್ರಾಣಿಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದ್ದು, ಅವುಗಳ ಆರೋಗ್ಯ ಸ್ಥಿತಿ ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.
ಅಕ್ರಮವಾಗಿ ಸಾಗಾಣೆ ಮಾಡಿರುವ ಶಂಕೆ..!
ಭಾರತದ ಅರಣ್ಯಗಳಲ್ಲಿ ಒರಾಂಗುಟಾಮ್ ಪ್ರಾಣಿಗಳು ಕಾಣಲು ಸಿಗುವುದಿಲ್ಲ, ಸ್ವಾಭಾವಿಕವಾಗಿ ಇಂಡೋನೆಷಿಯಾ ಮತ್ತು ಮಲೇಷ್ಯಾದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಈ ಪ್ರಾಣಿಗಳು, ಒಡಿಶಾದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅರಣ್ಯ ಇಲಾಖೆಯ ಪ್ರಾಥಮಿಕ ಅಂದಾಜಿನ ಪ್ರಕಾರ, ಇದು ವಿಫಲವಾದ ಅಕ್ರಮ ಸಾಗಣೆ ಕಾರ್ಯಾಚರಣೆಯ ಭಾಗವಾಗಿರಬಹುದು. ಮರಿಗಳನ್ನು ಯಾವುದೋ ಸ್ಥಳದಿಂದ ಸಾಗಿಸಿ, ಬಳಿಕ ಬಾಲಸೋರ್ನ ಕ್ಯಾಸುರಿನಾ ಅರಣ್ಯದಲ್ಲಿ ಬಿಟ್ಟುಹೋಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ಘಟನೆ ಸಂಬಂಧ ಒಡಿಶಾ ಅರಣ್ಯ ಇಲಾಖೆ ʼ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಅವುಗಳು ಅರಣ್ಯ ಪ್ರದೇಶಕ್ಕೆ ಹೇಗೆ ಬಂದವು ಹಾಗೂ ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಬದಾಪಾಯಿ–ರಣಕಠಾ ಪ್ರದೇಶದಲ್ಲಿ ಪ್ರತ್ಯೇಕ ತಂಡವನ್ನು ನಿಯೋಜಿಸಲಾಗಿದೆ.ಇದೇ ವೇಳೆ, ಕರಾವಳಿ ಭಾಗದ ಅರಣ್ಯ ವಿಭಾಗಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಮತ್ತಷ್ಟು ಒರಾಂಗುಟಾನ್ಗಳನ್ನು ಎಲ್ಲಿಯಾದರೂ ಬಿಟ್ಟುಹೋಗಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.