Search


ಮೊಹರಂ ವೇಳೆ 15 ಸಾವಿರ ಜನರನ್ನ ಕೊಲ್ಲಲು ಸ್ಕೆಚ್‌; ಆರೋಪಿ ಫಯಾಜ್‌ಗೆ ಇದೆ ಇರಾನ್‌ ಲಿಂಕ್‌

ಮುಂಬೈ : ಮೊಹರಂ (muharram) ಮೆರವಣಿಕೆ ವೇಳೆ ಮುಂಬೈನಲ್ಲಿ ಭೀಕರ ಹತ್ಯಾಕಾಂಡ ನಡೆಸಲು ರೂಪಿಸಿದ್ದ ಸಂಚೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಫಯಾಜ್‌ ಎಂಬಾತ ಕಳೆದ ಶುಕ್ರವಾರ ನಡೆದ ಮೊಹರಂ ಮೆರವಣಿಗೆಯಲ್ಲಿ 15 ಸಾವಿರ ಜನರಿಗೆ ವಿಷದ ಗುಳಿಗೆ ನೀಡಿ ಕೊಲ್ಲಲು ಸಂಚು ರೂಪಿಸಿದ್ದ ಎಂಬುದು ಬೆಳಕಿಗೆ ಬಂದಿದ್ದು.ಇದೀಗ ಈತನನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಇಲಿ ಪಾಶಾಣದ ಮಾತ್ರೆ ತಯಾರಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಏನಿದು ಸಂಚು...!

ಆರೋಪಿ ಫಯ್ಯಾಜ್ ಪ್ರೇಮ್‌ಜಿ (Fayyaz Premji) ಪುಣೆಯ ಕೊನಾರ್ಕ್ ನಗರ ಟೌನ್‌ಶಿಪ್‌ನ ರೋ ಹೌಸ್ ಸಂಖ್ಯೆ 25ರಲ್ಲಿ ವಾಸವಿದ್ದ ಹಾಗೂ ಆತನ ತಂದೆಯ ಪೇಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷಗಳ ಹಿಂದೆ ಈತನ ಪತ್ನಿ ಈತನನ್ನು ತೊರೆದು ಹೋಗಿದ್ದರಿಂದ ಮಾನಸಿಕ ನಿಯಂತ್ರಣ ಕಳೆದುಕೊಂಡಿದ್ದ ಈತ, ಇಡೀ ಪ್ರಪಂಚದ ಮೇಲೆ ಸೇಡು ತೀರಿಸಿಕೊಳ್ಳಲು ಈ ಸಾಮೂಹಿಕ ಹತ್ಯೆಯ ಸ್ಕೆಚ್ ಹಾಕಿದ್ದ ಎಂದು ನೆರೆಹೊರೆಯವರು ಹಾಗೂ ಪೊಲೀಸರು ತಿಳಿಸಿದ್ದಾರೆ.

ಈ ಹತ್ಯಾಕಾಂಡ  ನಡೆಸಲು ಈತ ಇಲಿಗಳನ್ನು ಸಾಯಿಸಲು ಬಳಸುವ ಜಿಂಕ್ ಫಾಸ್ಫೈಡ್ ಎಂಬ ತೀವ್ರ ವಿಷಕಾರಿ ಪುಡಿಯನ್ನು ಬಳಸಿ ಈತ ಕ್ಯಾಪ್ಸೂಲ್‌ಗಳನ್ನು ತಯಾರಿಸಿದ್ದ. ಈ ವಿಷದ ಪುಡಿ ಮಾನವ ದೇಹದ ಮೇಲೆ ಎಷ್ಟು ಪ್ರಮಾಣದಲ್ಲಿ ಮತ್ತು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಈತ ಗೂಗಲ್ ಮತ್ತು ಎಐ ತಂತ್ರಜ್ಞಾನದ ಮೂಲಕ ವ್ಯಾಪಕವಾಗಿ ಸಂಶೋಧನೆ ನಡೆಸಿ, ಆನ್‌ಲೈನ್‌ನಲ್ಲಿ 50 ಕೆಜಿ ಜಿಂಕ್ ಫಾಸ್ಫೈಡ್ ಹಾಗೂ 30,000 ಖಾಲಿ ಕ್ಯಾಪ್ಸೂಲ್‌ಗಳನ್ನು ಆರ್ಡರ್ ಮಾಡಿದ್ದ.

ನೋವು ನಿವಾರಕ ಮಾತ್ರೆ ಎಂದು ಹಂಚಿಕೆ...!

ಶುಕ್ರವಾರ ಮುಂಬೈನ ಬೈಕುಲ್ಲಾದಲ್ಲಿ ಮೊಹರಂ ಮೆರವಣಿಗೆ ನಡೆಯುತ್ತಿದ್ದಾಗ, ಈತ ಜನರ ಬಳಿ ತೆರಳಿ ಇವು ದೇಹದ ನೋವು ನಿವಾರಕ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳೆಂದು ಸುಳ್ಳು ಹೇಳಿ ಹಂಚುತ್ತಿದ್ದ. ಈತನ ವಿಚಿತ್ರ ವರ್ತನೆಯನ್ನು ಗಮನಿಸಿದ ಅಲ್ಲಿನ ಕೆಲವು ಮಹಿಳಾ ಸ್ವಯಂಸೇವಕರು ತಕ್ಷಣವೇ ಈತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಈ ಮಾತ್ರೆಗಳನ್ನು ಸೇವಿಸಿದ್ದ ಹಲವು ಭಕ್ತರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಬಂಧನದ ವೇಳೆ ಈತನ ಬಳಿ ಸುಮಾರು 15,000 ಜೀವಂತ ವಿಷದ ಮಾತ್ರೆಗಳು ಪತ್ತೆಯಾಗಿದ್ದು, ಇದನ್ನು ಪುಣ್ಯದ ಕೆಲಸ ಎಂದು ನಂಬಿಸಿ ಇತರರಿಂದಲೂ ಹಂಚಿಸಲು ಈತ ಪ್ರಯತ್ನಿಸಿದ್ದ ಎನ್ನಲಾಗಿದೆ.

ಉಗ್ರಗಾಮಿ ನಂಟು..?

ಇದರ ಜತೆಗೆ ಆರೋಪಿ ಫಯ್ಯಾಜ್ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 19 ಬಾರಿ ಇರಾನ್ ಮತ್ತು ಇರಾಕ್‌ ದೇಶಗಳಿಗೆ ಪ್ರವಾಸ ಮಾಡಿದ್ದು, ಕಳೆದ ವರ್ಷವಷ್ಟೇ ಅಲ್ಲಿ ಒಂದೆರಡು ತಿಂಗಳು ಕೆಲಸ ಮಾಡಿದ್ದ. ಆತನ ತಾಯಿ ಮತ್ತು ಸಹೋದರಿ ಇರಾನ್‌ನಲ್ಲಿ ವಾಸಿಸುತ್ತಿದ್ದಾರೆ. ಈತ ಕೇವಲ 19 ದಿನಗಳ ಅಂತರದಲ್ಲಿ ಮೂರು ಬಾರಿ ಇರಾನ್‌ಗೆ ಭೇಟಿ ನೀಡಿರುವುದು ಪತ್ತೆಯಾಗಿದ್ದು, ಈ ಘಟನೆಯ ಹಿಂದೆ ಯಾವುದೇ ಅಂತರರಾಷ್ಟ್ರೀಯ ಸಂಚು ಅಥವಾ ಉಗ್ರಗಾಮಿ ನಂಟು ಇದೆಯೇ ಎಂಬ ನಿಟ್ಟಿನಲ್ಲಿ ಎಟಿಎಸ್ (ATS) ಹಾಗೂ ತನಿಖಾಧಿಕಾರಿಗಳು ಆತನ ಬ್ಯಾಂಕ್ ಖಾತೆ ಹಾಗೂ ಕರೆಗಳ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.
 

By thebigbulletin.com - 29-06-2026


Ads in Post