Search


ಕೈಕೊಟ್ಟ ಪ್ರಿಯತಮೆ ; ಕಾರಲ್ಲಿ ನಾಡಬಾಂಬ್‌ ಸ್ಪೋಟಿಸಿಕೊಂಡು ಛಿದ್ರವಾದ ಭಗ್ನಪ್ರೇಮಿ

ತುಮಕೂರು : ಪ್ರಿಯತಮೆ ಮದುವೆಗೆ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಕಾರಿನಲ್ಲೆ ನಾಡಬಾಂಬ್‌ ಸ್ಪೋಟಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನ ಶಿರಾ ಬಳಿ ನಡೆದಿದೆ. ಬಾಂಬ್‌ ಸ್ಪೋಟಿಸುವುದಕ್ಕು ಮುನ್ನ ಯುವಕ ಪ್ರೇಯಸಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದ, ಈ ವೇಳೆ ಯುವತಿ ಕಾರ್‌ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಳು, ಇದಾದ ನಂತರ ಯುವಕ ಬಾಂಬ್‌ ಸ್ಪೋಟಿಸಿಕೊಂಡಿದ್ದಾನೆ.

ಮೃತ ಯುವಕನನ್ನ ನಾಗೇಂದ್ರ ಎಂದು ಗುರುತಿಸಲಾಗಿದ್ದು, ಯುವತಿ ರಮ್ಯಾ ಪ್ರೀತಿ ನಿರಾಕರಿಸಿದ್ದಕ್ಕೆ ಈ ರೀತಿ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ರಮ್ಯಾ ಹಾಗೂ ನಾಗೇಂದ್ರ ಇಬ್ಬರು ಅಂಕೋಲ ಮೂಲದವರು. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ರಮ್ಯಾ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರೆ, ನಾಗೇಂದ್ರ ಡೆಲಿವರಿ ಬಾಯ್ ಆಗಿದ್ದ. ಇಬ್ಬರು ಕಳೆದ ಏಳೆಂಟು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ರಮ್ಯಾ ಮದುವೆಗೆ ನಿರಾಕರಿಸಿದ್ದಳು.

ಇದರಿಂದ ಕೋಪಗೊಂಡ ನಾಗೇಂದ್ರ ಕಾರೊಂದನ್ನ ಬಾಡಿಗೆಗೆ ಪಡೆದು, ಯುವತಿಯನ್ನ ಬೆಂಗಳೂರಿನಿಂದ ಕಿಡ್ನಾಪ್‌ ಮಾಡಿದ್ದ. ಜೊತೆಗೆ ತಾನೇ ತಯಾರಿಸಿದ್ದ ನಾಡಬಾಂಬ್‌ವೊಂದನ್ನ ತಂದಿದ್ದ. ಕಾರು ತುಮಕೂರಿನ ಶಿರಾ ಬಳಿಯ ಕಳ್ಳಂಬೆಳ್ಳ ಬಳಿ ಬರುವ ವೇಳೆಗೆ ಇಬ್ಬರ ನಡುವೆ ತೀವ್ರ ಜಗಳವಾಗಿದ್ದು, ಈ ವೇಳೆ ನಾಗೇಂದ್ರ ಚಾಕುವಿನಿಂದ ರಮ್ಯಾಳ ತಲೆ ಮತ್ತು ಕೈಗೆ ಚುಚ್ಚಿ ಹಲ್ಲೆ ನಡೆಸಿದ್ದ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ರಮ್ಯಾ ಕಾರ್‌ನಿಂದ ಹೊರಗೆ ಜಿಗಿದಿದ್ದಾಳೆ. ಈ ವೇಳೆ ಯುವತಿಯ ಸಹಾಯಕ್ಕೆ ಎಂದು ಕಾರು ಚಾಲಕ ಕೂಡ ಕಾರಿಂದ ಕೆಳಗೆ ಇಳಿದಿದ್ದಾನೆ.

ಕಾರಿನೊಳಗೇ ಸಜೀವ ದಹನ

ಇದೇ ಸಮಯವನ್ನು ಬಳಸಿಕೊಂಡ ನಾಗೇಂದ್ರ ಕಾರಿನ ಎಲ್ಲಾ ಡೋರ್‌ಗಳನ್ನು ಒಳಗಿನಿಂದ ಲಾಕ್ ಮಾಡಿಕೊಂಡು, ತಾನು ತಂದಿದ್ದ ನಾಡಬಾಂಬ್ ಅನ್ನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ನಾಗೇಂದ್ರ ಕಾರಿನೊಳಗೇ ಸಜೀವ ದಹನವಾಗಿದ್ದಾನೆ. 

ಸದ್ಯ ಈ ಪ್ರಕರಣ ಭಾರಿ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಿಂದ ಪರಿಶೀಲನಾ ತಂಡ ಆಗಮಿಸಿದ್ದು. ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಮತ್ತು ಕಳ್ಳಂಬೆಳ್ಳ ಪೊಲೀಸರು ಜಂಟಿ ತನಿಖೆ ಮುಂದುವರಿಸಿದ್ದಾರೆ.
 

By Ravikumar - 27-06-2026


Ads in Post