ಈ ಶತಮಾನದ ಮಾದರಿ ಹೆಣ್ಣು…
ಕಳೆದ ಶತಮಾನದಲ್ಲಿಯೇ ಬೆಳ್ಳಿ ತೆರೆಯ ಮೇಲೆ ಹೀಗೊಂದು ಹಾಡು ಹಾಡಿದವರು ಈ ಕಲಾವಿದೆ. ಈ ಗೀತೆ ಕೇಳಿ ಅರ್ಧ ಶತಮಾನವೇ ಕಳೆದಿದೆ.1975 ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ ಶುಭ ಮಂಗಳ ಚಿತ್ರದ ಹಾಡಿದು.
ಮೇಲಿನ ಫೋಟೋದಲ್ಲಿ ಇರುವವರ ಗುರುತು ಸಿಕ್ಕಿತಾ? ತಾರೆ ಆರತಿ ಅವರ ಒಂದು ಹಳೆಯ ಚಿತ್ರ. 1973 ರ ಸಮಯದ್ದು. ಆರತಿ ಅವರ ಸಿನಿಮಾ ಬದುಕು ನಾನು ಸಿನಿಮಾ ಪತ್ರಿಕಾ ರಂಗದಲ್ಲಿ ಗುರುತಿಸಿಕೊಳ್ಳುವ ವೇಳೆಗಾಗಲೇ ಮುಗಿದಿತ್ತು ಎನ್ನಬಹುದು. ಆದರೂ ಒಮ್ಮೆ 2005/06 ರಲ್ಲಿ ಅವರನ್ನು ಮಗಳು ಯಶಸ್ವಿನಿ ಜೊತೆಯಲ್ಲಿ ಭೇಟಿಯಾಗುವ ಅವಕಾಶ ಕೂಡಾ ಲಭಿಸಿತ್ತು. ಅದೂ ಅವರ ನಿವಾಸದಲ್ಲಿ. ಕಾರಣ ಆ ಸಮಯದಲ್ಲಿ ಆರತಿ" ಮಿಠಾಯಿ ಮನೆ "ಎಂಬ ಸಿನಿಮಾ ಒಂದನ್ನು ನಿರ್ದೇಶನ ಮಾಡಿದ್ದರು.ನಿರ್ಮಾಣ ಮಾಡಿದವರು ಅವರ ಪತಿ ಚಂದ್ರಶೇಖರ ದೇಸಿ ಗೌಡರ್. ಪುತ್ರಿ ಯಶಸ್ವಿನಿ ಕಥೆ ಬರೆದಿದ್ದರು.ಅಂದು ಅಮ್ಮನ ಜೊತೆಗೆ ಮಗಳೂ ಜೊತೆಯಲ್ಲಿದ್ದರು. ಈ ಸಿನಿಮಾ ನಿಮಿತ್ತವೇ ಅಮೇರಿಕದಿಂದ ಬೆಂಗಳೂರು ತನಕ ಬಂದಿದ್ದರು.ಇದಿಷ್ಟು ಅವರ ಭೇಟಿಯ ಹಿನ್ನಲೆ.
ಪದವಿ ತರಗತಿಯಲ್ಲಿ ವಿಜ್ಞಾನದ ವಿದ್ಯಾರ್ಥಿನಿಯಾಗಿ ಸೇರಿದ್ದ ಆರತಿ ವೈದ್ಯೆಯಾಗುವ ಆಸೆ ಹೊತ್ತಿದ್ದರು.ಅಭಿನಯ, ನೃತ್ಯ ಇದು ಯಾವುದರ ತರಬೇತಿಯೂ ಇರಲಿಲ್ಲ.ಆದರೆ ಮುಂದಿನ ತಿರುವುಗಳು ಬೇರೆಯೇ ಆಗಿತ್ತು. ಪುಟ್ಟಣ್ಣ ಕಣಗಾಲರು ತಮ್ಮ ನಿರ್ದೇಶನದ "ಗೆಜ್ಜೆಪೂಜೆ "ಚಿತ್ರದಲ್ಲಿ ನಟಿಸಲು ಆರತಿಯವರ ಪೋಷಕರನ್ನು ಕೇಳಿದಾಗ ಅವರು ಸುತರಾo ಒಪ್ಪಿರಲಿಲ್ಲ ಆದರೆ ಪುಟ್ಟಣ್ಣನವರ ಹಠ ಸೋಲಲಿಲ್ಲ.
ಅಲ್ಲಿಂದ ಆರಂಭವಾದ ಅವರ ಸಿನಿ ಪಯಣ,"ಗೆಜ್ಜೆ ಪೂಜೆ" ತೆರೆಕಂಡ ಮೂರು ತಿಂಗಳಲ್ಲಿ ಆರತಿ ನಾಲ್ಕು ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆಯಾಗುವಂತೆ ಮಾಡಿತ್ತು..ಅದರಲ್ಲಿಯೂ ಅಭಿನಯಿಸಿದ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ, ಉಪಾಸನೆ, ಶುಭಮಂಗಳ, ಬಿಳೀ ಹೆಂಡ್ತಿ, ಕಥಾ ಸಂಗಮ,
ಫಲಿತಾಂಶ, ಧರ್ಮಸೆರೆ, ರಂಗನಾಯಕಿ, ಪಡುವಾರಹಳ್ಳಿ ಪಾಂಡವರು ಸೇರಿದಂತೆ ನಟಿಸಿದ್ದು ಪುಟ್ಟಣ್ಣನವರೇ ನಿರ್ದೇಶನ ಮಾಡಿದ್ದ ಹನ್ನೆರಡು ಚಿತ್ರಗಳು.ನಾಲ್ಕು ಬಾರಿ ರಾಜ್ಯ ಪ್ರಶಸ್ತಿ ನಾಲ್ಕು ಫಿಲಂ ಫೇರ್ ಪ್ರಶಸ್ತಿಗಳು ಅವರ ಪಾತ್ರಗಳಿಗೆ ಸಂದ ಗೌರವ.
(1984ರಲ್ಲಿ ಬಿಡುಗಡೆಯಾದ ಮಲ್ಟಿ ಸ್ಟಾರ್ ಸಿನಿಮಾ ಪ್ರೀತಿ ವಾತ್ಸಲ್ಯ. ಟೈಗರ್ ಪ್ರಭಾಕರ್ ಶ್ರೀನಾಥ್, ಆರತಿ, ಶ್ರೀಧರ್ , ವಿಶ್ವ ವಿಜೇತ, ಅನುರಾಧಾ , ವಿಜಯಕಾಶಿ ,ಉಮಾ ಶಿವಕುಮಾರ್, ಶ್ರೀನಿವಾಸ ಮೂರ್ತಿ, ರಮೇಶ್ ಭಟ್, ಲೋಹಿತಾಶ್ವ ಮೊದಲಾದವರ ತಾರಾ ಬಳಗವಿದ್ದ ಈ ಕಾದಂಬರಿ ಆಧಾರಿತ ಚಿತ್ರ ಭಾರ್ಗವ ನಿರ್ದೇಶನ ಮತ್ತು ನಿರ್ಮಾಣ ಮಾಡಿದ ಯಶಸ್ವಿ ಚಿತ್ರ.)
ಮತ್ತೊಂದು ವಿಶೇಷ, ಕಸ್ತೂರಿ ನಿವಾಸ, ನ್ಯಾಯವೇ ದೇವರು, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮಾ, ಪ್ರತಿಧ್ವನಿ, ಸಿಪಾಯಿರಾಮು, ಬಂಗಾರದ ಮನುಷ್ಯ ದಾರಿ ತಪ್ಪಿದಮಗ, ಬಹದ್ದೂರ್ ಗಂಡು ಸೇರಿದಂತೆ ರಾಜಕುಮಾರ್ ಅವರು ಅಭಿನಯಿಸಿದ ಹನ್ನೆರಡು ಚಿತ್ರಗಳಲ್ಲಿ ಆರತಿ ನಟಿಸಿದ್ದಾರೆ.
ದೂರದರ್ಶನ ವಾಹಿನಿ ಜನಪ್ರಿಯವಾಗಿದ್ದ ಸಮಯದಲ್ಲಿ" ನಮ್ಮ ನಮ್ಮಲ್ಲಿ" ಎಂಬ ಟೆಲಿಸರಣಿ ನಿರ್ದೇಶನ ಮಾಡಿದ್ದರು ಆರತಿ. ಅದು ಯಶಸ್ವಿಯೂ ಆಗಿತ್ತು. ಕರ್ನಾಟಕ ವಿಧಾನ ಪರಿಷತ್ತಿಗೆ ಒಮ್ಮೆ ನಾಮನಿರ್ದೇಶನಗೊಂಡಿದ್ದ ಆರತಿಯವರ ರಾಜಕಾರಣದ ನಂಟುಇದು .ಹೀಗೆ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ವಿ ತಾರೆಯಾದರೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಈ ತಾರೆ ಸಿನಿಮಾ ಬದುಕಿನಿಂದ ನಿವೃತ್ತರಾದ ಬಳಿಕ ಅಪರೂಪದ ಅತಿಥಿಯೇ ಆಗಿ ಹೋದರು .