ನವದೆಹಲಿ: ದೇಶಾದ್ಯಂತ ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ನೇತೃತ್ವ ವಹಿಸಿರುವ ಸಿಜೆಪಿ (CJP) ಮುಖ್ಯಸ್ಥ ಅಭೀಜಿತ್ ದೀಪ್ಕೆ ಅವರಿಗೆ ಟೈಫಾಯ್ಡ್ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ದೀಪ್ಕೆ ತಮ್ಮ ಆರೋಗ್ಯ ಸಮಸ್ಯೆ ಹೋರಾಟಕ್ಕೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಡಿಯೋಯದಲ್ಲಿ ಏನಿದೆ ?
"ನನಗೆ ಟೈಫಾಯ್ಡ್ ಆಗಿದೆ. ಪ್ರತಿದಿನ ಬೆಳಗ್ಗೆ ಐವಿ (IV) ಡ್ರಿಪ್ ಪಡೆಯುತ್ತಿದ್ದೇನೆ. ಆದರೆ ಇದರಿಂದ ನಮ್ಮ ಹೋರಾಟ ನಿಲ್ಲುವುದಿಲ್ಲ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಆರಂಭಿಸಿರುವ ಈ ಆಂದೋಲನವನ್ನು ಕೊನೆಯವರೆಗೂ ಮುಂದುವರಿಸುತ್ತೇವೆ" ಎಂದು ದೀಪ್ಕೆ ಹೇಳಿದ್ದಾರೆ. ಪರೀಕ್ಷಾ ಅಕ್ರಮಗಳಿಗೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಅವರು ಮತ್ತೊಮ್ಮೆ ಪುನರುಚ್ಚರಿಸಿದರು. ಸರ್ಕಾರ ಭರವಸೆ ನೀಡಿದರೂ ಪ್ರತಿಭಟನೆಯ ಉದ್ದೇಶ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಪ್ರಸ್ತುತ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಮತ್ತು ಯುವಕರು ಬೆಂಬಲ ಸೂಚಿಸುತ್ತಿದ್ದಾರೆ. ತಮ್ಮ ಆರೋಗ್ಯದ ನಡುವೆಯೂ ಹೋರಾಟವನ್ನು ಮುಂದುವರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ದೀಪ್ಕೆ, ವಿದ್ಯಾರ್ಥಿಗಳ ನ್ಯಾಯಕ್ಕಾಗಿ ಯಾವುದೇ ರೀತಿಯ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.