ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸಹ ಆರೋಪಿ ಪ್ರತಾಪ್ ಅವರನ್ನು ಬೆಂಗಳೂರಿನ ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಕಾರಾಗೃಹದಲ್ಲಿ ಮೊಬೈಲ್ ಬಳಕೆಯ ಕುರಿತು ತನಿಖೆ ನಡೆಸುತ್ತಿರುವ ಪರಪ್ಪನ ಅಗ್ರಹಾರ ಪೊಲೀಸರು, ಫೋನ್ ಪ್ರಜ್ವಲ್ ಅವರ ಕೈಗೆ ಹೇಗೆ ತಲುಪಿತು, ಅದನ್ನು ಯಾರು ಒದಗಿಸಿದರು ಮತ್ತು ಜೈಲಿನೊಳಗೆ ಯಾವ ರೀತಿಯಲ್ಲಿ ಬಳಸಲಾಗುತ್ತಿತ್ತು ಎಂಬುದನ್ನು ಪತ್ತೆಹಚ್ಚಲು ಇಬ್ಬರನ್ನೂ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಅನುಮತಿ ನೀಡಿದ್ದು, ಪ್ರಜ್ವಲ್ ರೇವಣ್ಣ ಅವರನ್ನು ಪ್ರತ್ಯೇಕ ಸ್ಥಳದಲ್ಲಿ ವಿಚಾರಣೆ ನಡೆಸಿ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ. ಆಗಸ್ಟ್ 11ರಂದು ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಸಿದ ದಾಳಿ ವೇಳೆ ಪ್ರಜ್ವಲ್ ಅವರಿಂದ ನೀಲಿ ಬಣ್ಣದ ಸ್ಮಾರ್ಟ್ಫೋನ್ವೊಂದನ್ನು ವಶಪಡಿಸಿಕೊಂಡಿದ್ದರು. ಮೊಬೈಲ್ನಲ್ಲಿ ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಹಲವು ಆ್ಯಪ್ಗಳು ಇನ್ಸ್ಟಾಲ್ ಆಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ವಶಪಡಿಸಿಕೊಂಡ ಮೊಬೈಲ್ನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯ ಪ್ರಕಾರ, ಈ ಫೋನ್ ಮೂಲಕ ಪ್ರಜ್ವಲ್ ಅವರು ಕುಟುಂಬ ಸದಸ್ಯರು ಹಾಗೂ ವಕೀಲರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಅಲ್ಲದೆ, ಮೊಬೈಲ್ನಲ್ಲಿದ್ದ ಸಿಮ್ ಕಾರ್ಡ್ನ್ನು ಆಂಧ್ರಪ್ರದೇಶದಿಂದ ಪಡೆಯಲಾಗಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.