ಲಕ್ನೋ: ಉತ್ತರಪ್ರದೇಶದ (UttaraPradesh) ಗಾಜಿಯಾಬಾದ್ನಲ್ಲಿ (Ghaziabad) ಬಕ್ರೀದ್ ಆಚರಣೆಗೆ ಬರಲು ಒಪ್ಪದ ವಿದ್ಯಾರ್ಥಿಯನ್ನ, ಚಾಕುವಿನಿಂದ ಹಿರಿದು ಕೊಲೆಗೈದ ಪ್ರಮುಖ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಉತ್ತರಪ್ರದೇಶದಲ್ಲಿ ಕಳೆದೊಂದು ದಶಕದಿಂದ ಎನ್ಕೌಂಟರ್ ಸದ್ದು ಜೋರಾಗಿಯೇ ಕೇಳಿ ಬರುತ್ತಿದ್ದು. ಇದೀಗ ಮತ್ತೊಬ್ಬ ಆರೋಪಿ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ಗಾಜಿಯಾಬಾದ್ನ ನವನೀತ್ ವಿಹಾರ್ ಕಾಲೋನಿಯ ನಿವಾಸಿ ಸೂರ್ಯ ಎಂಬ ಯುವಕನನ್ನ ಕೊಲೆಗೈದು, ತಲೆಮರಿಸಿಕೊಂಡಿದ್ದ ಅಸಾದ್ ಎಂಬಾತನನ್ನ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಎನ್ಕೌಂಟರ್ ಮಾಡಿದ್ದಾರೆ.
ಏನಿದು ಘಟನೆ...!
ಮೇ 28ರ ಮಧ್ಯಾಹ್ನ ಕೊಲೆಯಾದ ಸೂರ್ಯನಿಗೆ ಅವನ ಸ್ನೇಹಿತರು ಫೋನ್ ಕರೆ ಮಾಡಿ ಈದ್ ಆಚರಿಸುವುದಕ್ಕೆ ಕರೆದಿದ್ದರು. ಆದರೆ ಸೂರ್ಯನಿಗೆ ಹೋಗಲು ಇಷ್ಟವಿರಲಿಲ್ಲ. ಆದರೆ ಒತ್ತಾಯ ಮಾಡಿ ಅವನನ್ನು ಕರೆಸಿಕೊಂಡರು. ಈ ವೇಳೆ ಸೂರ್ಯನ ಜೊತೆ ಗುಂಪೊಂದು ಜೋರಾಗಿ ಜಗಳ ಮಾಡಿದ್ದು. ಈ ವೇಳೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಂದ ತಪ್ಪಿಸಿಕೊಂಡು ಓಡುತ್ತಿದ್ದ ಸೂರ್ಯನನ್ನ ಬೆನ್ನತ್ತಿದ ದುಷ್ಕರ್ಮಿಗಳ ಗುಂಪು, ಆತನನ್ನ ಅಡ್ಡಗಟ್ಟಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದರು. ಈ ಕುರಿತಾದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮಗನನ್ನು ಕಳೆದುಕೊಂಡಿದ್ದ ತಾಯಿ ತನ್ನ ಮಗನನ್ನ ಕೊಂದವರನ್ನು ಉಳಿಸಬೇಡಿ, ನನ್ನ ಮಗನ ಕೊಲೆ ಮಾಡಿದ 7 ಜನರ ಮನೆಯನ್ನ ಬುಲ್ಡೋಜರ್ ನುಗ್ಗಿಸಿ ಧ್ವಂಸ ಮಾಡಿ ಎಂದು ಗೋಗರೆದಿದ್ದರು.

ಎನ್ಕೌಂಟರ್ ನಡೆದಿದ್ದು ಹೇಗೆ?
ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಅಸಾದ್ ಸಹಚರರೊಂದಿಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದಾನೆ ಎಂದು ಸುಳಿವು ಸಿಕ್ಕಿತ್ತು. ಮಾಹಿತಿ ಆಧರಿಸಿ ಪೊಲೀಸರು ಹಲವೆಡೆ ಚೆಕ್ಪೋಸ್ಟ್ ಹಾಕಿ ಆರೋಪಿಗೆ ಬಲೆ ಬೀಸಿದ್ದರು. ಈ ವೇಳೆ ಅಸಾದ್ ಮತ್ತು ಅವನ ಸಹಚರರು ಬೈಕ್ನಲ್ಲಿ ಹೋಗುವಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದರು. ಈ ವೇಳೆ ಬೈಕ್ ನಿಲ್ಲಿಸಿ ಪೊಲೀಸರು ಅವರನ್ನು ತಡೆಯಲು ಮುಂದಾದ ವೇಳೆ ಅಸಾದ್ ಪೊಲೀಸರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ.
ಇತ್ತ ಪೊಲೀಸರು ಕೂಡ ತಮ್ಮ ಆತ್ಮರಕ್ಷಣೆಗೆ ಅಸಾದ್ ಹಾಗೂ ಅವನ ಸಹಚರರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಅಸಾದ್ ದೇಹಕ್ಕೆ ಗುಂಡು ತಗುಲಿ ತೀವ್ರ ಗಾಯಗೊಂಡಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಗುಂಡಿನ ಚಕಮಕಿಯಲ್ಲಿ ಪೊಲೀಸ್ ಕಾನ್ಸ್ಟೆಬಲ್ ಕೂಡ ಗಾಯಗೊಂಡಿದ್ದು, ಅವರಿಗೂ ಕೂಡ ಆಸ್ಪತ್ರೆಯಲ್ಲಿ ಚಕಿತ್ಸೆ ಮುಂದುವರೆದಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಸೂರ್ಯನ ಸ್ನೇಹಿತರಾಗಿದ್ದರು. ಅಸಾದ್ ಬಳಸಿದ್ದ ಬೈಕ್ ಹಾಗೂ ಗುಂಡು ಹಾರಿಸಲು ಬಳಸಿದ್ದ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಶರು ಹೇಳಿದ್ದಾರೆ. ಬೈಕ್ ಓಡಿಸುವ ವಿಚಾರಕ್ಕೆ ಜಗಳ ನಡೆದು, ಅದು ವಿಕೋಪಕ್ಕೆ ತಿರುಗಿದೆ. ಕೋಪದ ಭರದಲ್ಲಿ ಒಬ್ಬ ಆರೋಪಿ ಸೂರ್ಯನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.