Search


ಮೂರು ಗಂಟುಹಾಕಿ ಸಂಸಾರ ಸಾಗರಕ್ಕೆ ಜಿಗಿದ ಚಿಕ್ಕಣ್ಣ; ಶುರುವಾಯ್ತು ನವಜೀವನ

ಮೈಸೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಹಾಗೂ ಪಾವನಾ ಗೌಡ ಅವರ ವಿವಾಹ ಇಂದು (ಆಗಸ್ಟ್ 30) ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಮದುವೆಗೂ ಮುನ್ನ ಆಗಸ್ಟ್ 29ರಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಚಿತ್ರರಂಗದ ಹಲವು ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ.

ಶ್ರೀರಂಗಪಟ್ಟಣದ ಮಹದೇವಪುರ ಗ್ರಾಮದ ಪಾವನಾ ಗೌಡ ಅವರನ್ನು ಚಿಕ್ಕಣ್ಣ ವರಿಸಲಿದ್ದಾರೆ. ಈಗಾಗಲೇ ಎರಡೂ ಕುಟುಂಬಗಳಲ್ಲಿ ಅರಿಶಿಣ ಸೇರಿದಂತೆ ವಿವಿಧ ಮದುವೆ ಶಾಸ್ತ್ರಗಳು ನೆರವೇರಿವೆ. ಪಾವನಾ ಗೌಡ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಿನ್ನೆಲೆ ಹೊಂದಿದ್ದು, ಪರಿಸರ ಸ್ನೇಹಿ ಉದ್ಯಮವನ್ನೂ ನಡೆಸುತ್ತಿದ್ದಾರೆ. ತಮ್ಮ ಮದುವೆ ಅರೇಂಜ್‌ಮ್ಯಾರೇಜ್ ಆಗಿದ್ದರೂ, ಕುಟುಂಬಸ್ಥರು ಹುಡುಗಿ ಹುಡುಕಲು ಆರಂಭಿಸಿದ ಬಳಿಕ ಪಾವನಾ ಅವರೊಂದಿಗೆ ಪ್ರೀತಿ ಮೂಡಿತು ಎಂದು ಚಿಕ್ಕಣ್ಣ ಈ ಹಿಂದೆ ಹೇಳಿಕೊಂಡಿದ್ದರು. ಹೀಗಾಗಿ ತಮ್ಮದು ‘ಅರೇಂಜ್ ಕಮ್ ಲವ್ ಮ್ಯಾರೇಜ್’ ಎಂದು ಅವರು ಹೇಳಿದ್ದರು.

ಆರತಕ್ಷತೆ ಕಾರ್ಯಕ್ರಮದಲ್ಲಿ ರಂಗಾಯಣ ರಘು, ಅದಿತಿ ಪ್ರಭುದೇವ, ಮುಖ್ಯಮಂತ್ರಿ ಚಂದ್ರು, ಹಂಸಲೇಖ, ಮೇಘನಾ ಗೌಂಕರ್, ಅನೀಶ್, ಪ್ರಥಮ್, ನಾಗೇಂದ್ರ ಪ್ರಸಾದ್, ಡಾಲಿ ಧನಂಜಯ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಚಿಕ್ಕಣ್ಣ-ಪಾವನಾ ಜೋಡಿಗೆ ಶುಭ ಕೋರಿದ್ದಾರೆ. ಇದೀಗ ಆಗಸ್ಟ್ 30ರಂದು ನಡೆಯಲಿರುವ ವಿವಾಹ ಸಮಾರಂಭದ ಮೂಲಕ ಚಿಕ್ಕಣ್ಣ ಹಾಗೂ ಪಾವನಾ ಗೌಡ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

By Ravikumar - 30-08-2026


Ads in Post