ಇಂದೋರ್ : ಮಧ್ಯಪ್ರದೇಶದ ಭೋಜಶಾಲಾ ಕಾಂಪ್ಲೆಕ್ಸ್ ಹಿಂದುಗಳಿಗೆ ಸೇರಿದ್ದು ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದಶಕಗಳಷ್ಟು ಹಳೆಯದಾದ ಭೋಜಶಾಲಾ-ಕಮಲ್ ಮೌಲಾ ಮಸ್ಜಿದ್ ವಿವಾದದ ಕುರಿತಾಗಿ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ತನ್ನ ತೀರ್ಪು ನೀಡಿದ್ದು. ಧಾರ್‌ನಲ್ಲಿರು ಭೋಜಶಾಲ ಸಂಕೀರ್ಣ ವಾಗ್ದೇವಿ ಸರಸ್ವತಿಗೆ ಸೇರಿದ್ದು ಎಂದು ಘೋಷಿಸಿದೆ. ಹಾಗೆ ಮುಸ್ಲಿಮರು ಈ ಸ್ಥಳದಲ್ಲಿ ನಮಾಜ್ ಮಾಡಲು ನೀಡಿದ್ದ ಅನುಮತಿಯನ್ನ ರದ್ದುಗೊಳಿಸಿದೆ.
ನ್ಯಾಯಮೂರ್ತಿ ವಿಜಯ್ ಕುಮಾರ್ ಶುಕ್ಲಾ ಮತ್ತು ನ್ಯಾಯಮೂರ್ತಿ ಅಲೋಕ್ ಅವಸ್ಥಿ ಅವರ ವಿಭಾಗೀಯ ಪೀಠವು ಧಾರ್‌ನಲ್ಲಿರುವ ಈ ವಿವಾದಿತ ಸ್ಥಳ ವಾಗ್ದೇವಿ ಸರಸ್ವತಿಗೆ ಮೀಸಲಾಗಿರುವ ದೇವಾಲಯ ಎಂದು ಹೇಳಿದೆ. ಈ ಸ್ಥಳ ರಾಜ ಭೋಜನಿಗೆ ಸಂಬಂಧಿಸಿದ ಸಂಸ್ಕೃತ ಕಲಿಕಾ ಕೇಂದ್ರವಾಗಿತ್ತು ಎಂಬುದನ್ನ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಜೊತೆಗೆ ಈ ವಿವಾದಿತ ಸ್ಥಳದಲ್ಲಿ ಹಿಂದುಗಳು ಮಂಗಳವಾರ ಪೂಜೆ ಸಲ್ಲಿಸಬಹುದು ಮತ್ತು ಮುಸ್ಲಿಂರು ಶುಕ್ರವಾರದ ನಮಾಜ್ ಮಾಡಬಹುದು ಎಂದು 2003ರಲ್ಲಿ ಭಾರತೀಯ ಪುರತತ್ವ ಇಲಾಖೆ ನೀಡಿದ್ದ ಸುತ್ತೋಲೆಯನ್ನ ಕೂಡ ಹೈಕೋರ್ಟ್ ರದ್ದುಗೊಳಿಸಿದೆ.
ಅಷ್ಟೇ ಅಲ್ಲದೆ ಲಂಡನ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ ಎನ್ನಲಾದ ಸರಸ್ವತಿ ದೇವಿಯ ವಿಗ್ರಹವನ್ನು ಹಿಂದಿರುಗಿಸುವಂತೆ ಕೋರಿ ಹಿಂದೂ ಅರ್ಜಿದಾರರ ಬೇಡಿಕೆಗಳನ್ನು ಸಹ ಪೀಠವು ಗಮನಿಸಿತು. ಈ ವಿಗ್ರಹವನ್ನು ಹಿಂದಿರುಗಿಸುವುದು ಮತ್ತು ಭೋಜಶಾಲಾ ಸಂಕೀರ್ಣದೊಳಗೆ ಈ ಮೂರ್ತಿಯ ಸ್ಥಾಪನೆಯನ್ನು ಮಾಡುವ ಬಗ್ಗೆಯೂ ಸರ್ಕಾರ ನಿರ್ಧರಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಈ ಮೂಲಕ ಹಿಂದುಗಳ ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಸುದೀರ್ಘ ಸಂರ್ಘಷಕ್ಕೆ ಪೂರ್ಣವಿರಾಮ ಬಿದ್ದಂತಾಗಿದೆ.
ಏನಿದು ವಿವಾದ...!
ಭೋಜಶಾಲಾ ವಿವಾದವು ದಶಕಗಳಷ್ಟು ಹಿಂದಿನದು. ಹಿಂದೂಗಳು ಈ ಸ್ಥಳವನ್ನು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವೆಂದು ಪರಿಗಣಿಸುತ್ತಾರೆ. ಆದರೆ ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ನಂಬುತ್ತಾರೆ. ಆದರೆ ದೇವಾಲಯದ ಹಿನ್ನಲೆಯನ್ನು ಗಮನಿಸುವುದಾದರೆ.
11ನೇ ಶತಮಾನದಲ್ಲಿ ಪರಮಾರ ರಾಜವಂಶದ ಭೋಜರಾಜ ಎಂಬಾತ ಈ ಸ್ಥಳದಲ್ಲಿ ವಿದ್ಯಾಕೇಂದ್ರ ಸ್ಥಾಪಿಸಿದ್ದರು. ಆದರೆ 13 ಮತ್ತು 14ನೇ ಶತಮಾನದ ನಡುವೆ ದೆಹಲಿ ಸುಲ್ತಾನರು ಈ ದೇವಾಲಯದ ಕೆಲವು ಭಾಗಗಳನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಿದ್ದರು ಎಂಬ ಐತಿಹಾಸಿಕ ದಾಖಲೆಗಳು ಲಭ್ಯವಿದೆ. ನಂತರ ಬ್ರಿಟಿಷರ ಕಾಲದಲ್ಲಿ ಈ ಸ್ಥಳವನ್ನ ಪುರತತ್ವ ಸ್ಥಳವೆಂದು ಗುರುತಿಸಲಾಯಿತು. ಇದಾದ ನಂತರ ಈ ಸ್ಥಳದ ಪೂಜೆಯ ಹಕ್ಕಿಗಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷಗಳು ಆರಂಭವಾದವು.