Search


ಜಪಾನ್‌ ನಂತರ, ನೇಪಾಳದಿಂದಲೂ ಭಾರತದ ಮಾವಿಗೆ ನಿರ್ಬಂಧ: ರೈತರಲ್ಲಿ ಆತಂಕ

ಕಠ್ಮಂಡು: ಇತ್ತೀಚೆಗೆ ಜಪಾನ್‌ ಭಾರತದಿಂದ ಆಮದಾಗುತ್ತಿದ್ದ ಮಾವಿನ ಹಣ್ಣಿಗೆ ಅನಿರ್ಧಿಷ್ಟಾವಧಿ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ನೇಪಾಳ ಕೂಡ ಭಾರತದ ಮಾವಿನ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದು. ಮಾವಿನ ಹಣ್ಣಿನಲ್ಲಿ ಸುರಕ್ಷತಾ ಮಿತಿಗಿಂತ ಹೆಚ್ಚಿನ ಪ್ರಮಾಣದ ಕೀಟನಾಶಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನೇಪಾಳದ ಕ್ವಾರಂಟೈನ್ ಅಧಿಕಾರಿಗಳು ನಡೆಸಿದ ಪರೀಕ್ಷೆಯಲ್ಲಿ ಕೆಲವು ಮಾವಿನ ಹಣ್ಣಿನ ಸಾಗಣೆಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಕೀಟನಾಶಕ ಅಂಶಗಳು ಕಂಡುಬಂದಿವೆ. ಗ್ರಾಹಕರ ಆರೋಗ್ಯ ರಕ್ಷಣೆ ಮತ್ತು ಆಹಾರ ಸುರಕ್ಷತಾ ನಿಯಮಗಳ ಪಾಲನೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ. ಈ ಕ್ರಮವು ಕೇವಲ ಆಹಾರ ಸುರಕ್ಷತಾ ನಿಯಮಗಳಿಗೆ ಸಂಬಂಧಿಸಿದ್ದು, ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧಗಳ ಮೇಲೆ ಯಾವುದೇ ಪರಿಣಾಮ ಬೀರುವ ಉದ್ದೇಶ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮೊದಲು ಜಪಾನ್ ಕೂಡ ಭಾರತೀಯ ಮಾವಿನ ಹಣ್ಣಿನ ಆಮದನ್ನು ಸ್ಥಗಿತಗೊಳಿಸಿತ್ತು. ಆದರೆ ಜಪಾನ್‌ನ ನಿರ್ಧಾರ ಕೀಟನಾಶಕ ಅಂಶಗಳಿಗೆ ಸಂಬಂಧಿಸಿರಲಿಲ್ಲ. ಜಪಾನ್ ಅಧಿಕಾರಿಗಳು ಭಾರತದಲ್ಲಿನ ಕೆಲವು ಸಂಸ್ಕರಣಾ ಕೇಂದ್ರಗಳಲ್ಲಿ ಕೀಟ ನಿಯಂತ್ರಣ ಕ್ರಮಗಳಲ್ಲಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನಿರ್ಬಂಧ ಹೇರಿದ್ದರು. ಈ ನಿರ್ಬಂಧದಿಂದ ಅಲ್ಫೋನ್ಸೋ, ಕೇಸರ್, ಲಂಗ್ರಾ ಹಾಗೂ ಬಂಗನಪಲ್ಲಿ ಸೇರಿದಂತೆ ಹಲವು ಜನಪ್ರಿಯ ಭಾರತೀಯ ತಳಿಗಳ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.

By Ravikumar - 10-06-2026


Ads in Post