ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಹತ್ವದ ಮಾಹಿತಿ ನೀಡಿದೆ. ವಿಮಾನದ ಫ್ಯೂಯೆಲ್ ಕಂಟ್ರೋಲ್ ಸ್ವಿಚ್ನಲ್ಲಿ ಯಾವುದೇ ತಾಂತ್ರಿಕ ದೋಷ ಪತ್ತೆಯಾಗಿಲ್ಲ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ತಿಳಿಸಿದ್ದಾರೆ.
ಬೋಯಿಂಗ್ ಹಾಗೂ ಸಂಬಂಧಿತ ತಾಂತ್ರಿಕ ತಜ್ಞರು ನಡೆಸಿದ ಪರಿಶೀಲನೆಯಲ್ಲಿ ಸ್ವಿಚ್ನ ಕಾರ್ಯವೈಖರಿ ಸಾಮಾನ್ಯವಾಗಿರುವುದು ದೃಢಪಟ್ಟಿದೆ. ಆದರೆ, ವಿಮಾನದ ಥ್ರಸ್ಟ್ ಕಂಟ್ರೋಲ್ ಮಾಡ್ಯೂಲ್ ಸೇರಿದಂತೆ ಇತರೆ ತಾಂತ್ರಿಕ ಅಂಶಗಳ ಪರಿಶೀಲನೆ ಇನ್ನೂ ಮುಂದುವರಿದಿದೆ. ಈ ಕಾರಣದಿಂದ ಅಪಘಾತದ ನಿಖರ ಕಾರಣದ ಬಗ್ಗೆ ಅಂತಿಮ ವರದಿ ಬರುವವರೆಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅಹಮದಾಬಾದ್ನಲ್ಲಿ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಸಂಭವಿಸಿದ ಈ ಭೀಕರ ದುರಂತದಲ್ಲಿ 260 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆರಂಭಿಕ ತನಿಖೆಯಲ್ಲಿ ಫ್ಯೂಯೆಲ್ ಕಂಟ್ರೋಲ್ ಸ್ವಿಚ್ ಕುರಿತು ಅನುಮಾನ ವ್ಯಕ್ತವಾಗಿದ್ದರೂ, ಇದೀಗ ಅದರಲ್ಲಿ ಯಾವುದೇ ತಾಂತ್ರಿಕ ದೋಷ ಇಲ್ಲ ಎಂಬುದು ಸ್ಪಷ್ಟವಾಗಿದೆ. ಅಂತಿಮ ತನಿಖಾ ವರದಿ ಪ್ರಕಟವಾದ ಬಳಿಕವೇ ದುರಂತಕ್ಕೆ ಕಾರಣವಾದ ನಿಖರ ಅಂಶಗಳು ಬಹಿರಂಗವಾಗಲಿವೆ.