ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ತೃತೀಯಲಿಂಗಿಗಳಿಂದ ಆಕ್ರಮಣಕಾರಿ ರೀತಿಯಲ್ಲಿ ಹಣ ಕೇಳುವುದು, ವಾಹನ ಸಂಚಾರಕ್ಕೆ ಅಡ್ಡಿಪಡಿಸುವುದು, ಬೆದರಿಕೆ ಹಾಗೂ ಕಿರುಕುಳ ನೀಡುತ್ತಿರುವ ಕುರಿತು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಪರಿಶೀಲಿಸಿ, ಆಕ್ರಮಣಕಾರಿ ರೀತಿಯಲ್ಲಿ ಹಣ ಅಥವಾ ಭಿಕ್ಷೆ ಕೇಳುವುದು, ವಾಹನ ಸವಾರರಿಗೆ ತೊಂದರೆ ನೀಡುವುದು, ಬೆದರಿಕೆ ಹಾಕುವುದು, ನಿಂದನಾತ್ಮಕ ವರ್ತನೆ, ಹಲ್ಲೆ ಅಥವಾ ಕಿರುಕುಳದಂತಹ ಘಟನೆಗಳು ಕಂಡುಬಂದರೆ ಪರಿಸ್ಥಿತಿಗೆ ಅನುಗುಣವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ.
ವಿಶೇಷವಾಗಿ ಟ್ರಾಫಿಕ್ ಸಿಗ್ನಲ್‌ಗಳು, ಸೂಕ್ಷ್ಮ ಪ್ರದೇಶಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಮಾರಂಭಗಳ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇಂತಹ ದೂರುಗಳು ಪದೇಪದೇ ಬರುತ್ತಿರುವ ಸ್ಥಳಗಳನ್ನು ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುತಿಸಿ, ಆ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸುವಂತೆಯೂ ಸೂಚಿಸಲಾಗಿದೆ.
ಇದರ ಜೊತೆಗೆ, ತೃತೀಯಲಿಂಗಿ ಸಮುದಾಯದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಜಾಗೃತಿ ಮೂಡಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಮತ್ತು ಸುಗಮ ಸಂಚಾರವನ್ನು ಖಚಿತಪಡಿಸುವುದರ ಜತೆಗೆ, ತೃತೀಯಲಿಂಗಿಗಳ ಕಾನೂನುಬದ್ಧ ಹಕ್ಕುಗಳು, ಘನತೆ ಹಾಗೂ ಗೌರವವನ್ನು ರಕ್ಷಿಸುವ ಜವಾಬ್ದಾರಿಯನ್ನೂ ಪೊಲೀಸರು ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.