ಬೆಂಗಳೂರು: ಗಲ್ಫ್ ಯುದ್ಧದ ಪರಿಣಾಮ ಜೀವನ ನಿರ್ವಹಣೆ ದಿನೇ ದಿನೇ ದುಬಾರಿಯಾಗುತ್ತಿರುವ ನಡುವೆ ರಾಜ್ಯದ ಪೋಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಈ ವರ್ಷ ಖಾಸಗಿ ಶಾಲೆಗಳು ಈಗಾಗಲೇ ಶೇ.10ರಷ್ಟು ಶಾಲಾ ಶುಲ್ಕವನ್ನು ಹೆಚ್ಚಳ ಮಾಡಿವೆ. ಈ ಮಧ್ಯೆ ಇದೀಗ ಶಾಲಾ ಬಸ್ ಮತ್ತು ವ್ಯಾನ್ ದರ ಏರಿಕೆಗೆ ಮುಂದಾಗಿವೆ. ಹೀಗಾಗಿ ಶಾಲೆಗಳು ಆರಂಭಕ್ಕೂ ಮುನ್ನವೇ ಪೋಷಕರಿಗೆ ಡಬಲ್ ಡಬಲ್ ಶಾಕ್ ಎದುರಾಗಿದೆ.
ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್ಜಿ ದರ ಏರಿಕೆಯಾಗಿದ್ದು. ಇದರ ಪರಿಣಾಮವಾಗಿ ಖಾಸಗಿ ಬಸ್ ಮಾಲೀಕರು ಬಸ್ ದರವನ್ನ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ. ಇದರ ನಡುವೆ ಕ್ಯಾಬ್ಗಳ ದರವನ್ನು ಹೆಚ್ಚಸುವಂತೆ ಪ್ರಸ್ತಾವನೆ ಸಲ್ಲಿಕೆಯಾಗಿದೆ., ಇದೇ ರೀತಿ ಇಂಧನ ದರ ಹೆಚ್ಚಳದ ಕಾರಣ ನೀಡಿ ಖಾಸಗಿ ಶಾಲಾ ವಾಹನ ಮಾಲೀಕರು ಶೇ.10ರಿಂದ 15ರಷ್ಟು ದರ ಏರಿಕೆಗೆ ಮುಂದಾಗಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಈ ಹಂತದಲ್ಲೇ ದರ ಹೆಚ್ಚಳದ ನಿರ್ಧಾರ ಮಾಡಿದ್ದಾರೆ.
ಇನ್ನು ಕರ್ನಾಟಕದಲ್ಲಿ ಸುಮಾರು 20 ಸಾವಿರ ಖಾಸಗಿ ಶಾಲಾ ಬಸ್, ವ್ಯಾನ್ಗಳು ಕಾರ್ಯನಿರ್ವಹಿಸುತ್ತಿವೆ. ಗಲ್ಫ್ ಬಿಕ್ಕಟ್ಟಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾಗಿದ್ದು, ಅದರ ನೇರ ಪರಿಣಾಮ ದೇಶೀಯ ಪೆಟ್ರೋಲ್-ಡೀಸೆಲ್ ದರದ ಮೇಲೆ ಬಿದ್ದಿದೆ. ಇದನ್ನೇ ಮುಂದಿಟ್ಟುಕೊಂಡು ವಾಹನ ಮಾಲೀಕರು ದರ ಏರಿಕೆಗೆ ಮುಂದಾಗಿದ್ದಾರೆ. ಇದರಿಂದಾಗಿ ಪೋಷಕರು ಮಾತ್ರ ಕಂಗಾಲಾಗಿದ್ದಾರೆ.
ಇನ್ನು ಈ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಈ ವರ್ಷ ಶಾಲಾ ಶುಲ್ಕದ ಜೊತೆ ಶಾಲಾ ವಾಹನಗಳ ಬೆಲೆ ಏರಿಕೆ ಶಾಕ್ ನೀಡಿದೆ. ಇದು ಪೋಷಕರಿಗೆ ದೊಡ್ಡ ಹೊರೆಯಾಗಿದೆ. ದುಡ್ಡು ಇರುವವರು ಕಟ್ಟುತ್ತಾರೆ. ಮದ್ಯಮ ವರ್ಗದ ಪೋಷಕರಿಗೆ ಇದು ತುಂಬಾ ಹೊರೆ ಆಗಲಿದೆ. ಪ್ರತಿವರ್ಷ ಶುಲ್ಕ ಏರಿಕೆ ತುಂಬಾ ಕಷ್ಟ. ಬಸ್, ಆಟೋ ದರ ಏರಿಕೆಯಾಗುತ್ತಿದೆ. ಆದರೆ ನಮ್ಮ ಸಂಬಳ ಮಾತ್ರ ಅಷ್ಟೇ ಇದೆ. ನಾಳೆ ಯಾವುದು ಏರಿಕೆ ಆಗುತ್ತದೆ ಎಂಬ ಯೋಚನೆಯಾಗಿದೆ ಎಂದಿದ್ದಾರೆ.