Search


ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕನನ್ನ ಏರ್‌ಲಿಫ್ಟ್‌ ಮಾಡಿ ಚಿಕಿತ್ಸೆ ಕೊಡಿಸಿದ ಅನಂತ್‌ ಅಂಬಾನಿ

ದೇಹಾದ್ಯಂತ ತೀವ್ರ ಉರಿಯಿಂದ ಕೆರೆಯಲ್ಲೇ ದಿನವಿಡಿ ಕಳೆಯುತ್ತಿದ್ದ ಬಾಲಕನನ್ನ ಉದ್ಯಮಿ ಅನಂತ್‌ ಅಂಬಾನಿ ಏರ್‌ಲಿಫ್ಟ್‌ ಮಾಡಿ ಮುಂಬೈಗೆ ಕರೆತಂದು ಚಿಕಿತ್ಸೆ ನೀಡಿದ್ದಾರೆ. ಹೌದು ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್‌ನ (Murshidabad) ಇಕ್ಬಾಲ್ ಶೇಖ್ ವಿಚಿತ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆತನ ವಿಡಿಯೋ ವೈರಲ್‌ ಆದ ಬಳಿಕ ಉದ್ಯಮಿ ಅನಂತ್ ಅಂಬಾನಿ (Anant Ambani) ಈತನ ನೆರವಿಗೆ ಬಂದಿದ್ದು, ಇದೀಗ ಇಕ್ಬಾಲ್‌ನನ್ನು ಚಿಕಿತ್ಸೆಗಾಗಿ ಮುಂಬೈಗೆ ಏರ್‌ಲಿಫ್ಟ್ ಮಾಡಲಾಗಿದೆ.

ವರದಿಗಳ ಪ್ರಕಾರ, ಇಕ್ಬಾಲ್ ನೀರಿನಿಂದ ಹೊರಬಂದ ತಕ್ಷಣ ದೇಹದಾದ್ಯಂತ ತೀವ್ರ ಸುಡುವ ಅನುಭವವಾಗುತ್ತದೆ ಎಂದು ಹೇಳುತ್ತಿದ್ದ. ಹೀಗಾಗಿ ಆತ ಗಂಟೆಗಟ್ಟಲೆ ಕೆರೆಯಲ್ಲೇ ಮುಳುಗಿ ಇರುತ್ತಿದ್ದ. ಕೆಲವೊಮ್ಮೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ತೆರಳಿ ಅಲ್ಲಿಯೇ ಸಮಯ ಕಳೆಯುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೇ ಹಲವು ಬಾರಿ ಇಕ್ಬಾಲ್‌ ಕೆರೆಯಲ್ಲಿ ಕುಳಿತೇ ಉಪಹಾರ ಸೇವಿಸುತ್ತಿದ್ದ ಎಂಬ ಅಂಶವು ಬೆಳಕಿಗೆ ಬಂದಿದೆ.

ಇಕ್ಬಾಲ್‌ನ ಈ ಪರಿಸ್ಥಿತಿಯ ಕುರಿತು ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೋರಿ ಮಾಡಿದ್ದ ಮನವಿಯನ್ನು ಗಮನಿಸಿದ್ದ ಅನಂತ್‌ ಅಂಬಾನಿ. ಬಾಲಕನ ಚಿಕಿತ್ಸೆಗೆ ನೆರವು ನೀಡಲು ಮುಂದಾದ ಅವರು, ಆತನನ್ನು ಮುಂಬೈನ ಸರ್ ಹೆಚ್.ಎನ್.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಇಕ್ಬಾಲ್‌ನ ಆರೋಗ್ಯ ಸ್ಥಿತಿಯನ್ನು ವೈದ್ಯರು ಸಮಗ್ರವಾಗಿ ಪರಿಶೀಲಿಸಲಿದ್ದಾರೆ. ದೇಹದಾದ್ಯಂತ ಉರಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ, ಅಗತ್ಯವಿರುವ ಚಿಕಿತ್ಸೆಯನ್ನು ನೀಡಲಾಗುತ್ತದೆ.

Murshidabad Teen Iqbal Sheikh Lives in Ponds as Body Burns Outside Water

ಇಕ್ಬಾಲ್‌ನ ಕುಟುಂಬವು ಆತನಿಗೆ ದೀರ್ಘಕಾಲದಿಂದ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಹೇಳಿದೆ. ಈ ಹಿಂದೆ ಹಲವು ಬಾರಿ ಆಸ್ಪತ್ರೆಗೆ ಕರೆದೊಯ್ದಿದ್ದರೂ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ. ಮುಂದುವರಿದ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ ಕುಟುಂಬವು ಸಾರ್ವಜನಿಕರಿಂದ ಸಹಾಯ ಕೋರಿತ್ತು.ಇದೀಗ ಅನಂತ್ ಅಂಬಾನಿ ಅವರ ನೆರವಿನಿಂದ ಬಾಲಕನಿಗೆ ಹೆಚ್ಚಿನ ಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯುವಂತಾಗಿದೆ. ಇಕ್ಬಾಲ್‌ನ ನಿಖರ ಆರೋಗ್ಯ ಸಮಸ್ಯೆ ಏನು ಎಂಬುದು ವೈದ್ಯಕೀಯ ಪರೀಕ್ಷೆಗಳ ಬಳಿಕ ಸ್ಪಷ್ಟವಾಗಬೇಕಿದೆ.

By Ravikumar - 19-08-2026


Ads in Post