ತಿರುಮಲ: ರಿಲಯನ್ಸ್ ಇಂಡಸ್ಟ್ರೀಸ್ನ ಕಾರ್ಯಕಾರಿ ನಿರ್ದೇಶಕ ಅನಂತ್ ಅಂಬಾನಿ (Anant ambani) ಆಂಧ್ರಪ್ರದೇಶದ ಪವಿತ್ರ ಕ್ಷೇತ್ರವಾದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ಮುಡಿ ಅರ್ಪಿಸಿರುವ ಅನಂತ್, ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಕೊಂಡಿದ್ದಾರೆ, ತಿಮ್ಮಪ್ಪನ ಮೇಲೆ ಅಪಾರ ಭಕ್ತಿ ಹೊಂದಿರುವ ಅಂಬಾನಿ ಕುಟುಂಬ ನಿರಂತರವಾಗಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ದೇವಾಲಯಕ್ಕೆ ಆಗಮಿಸಿದ ಅನಂತ್ ಅಂಬಾನಿ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕಾರಿಗಳು ಮತ್ತು ಅರ್ಚಕರು ಆತ್ಮೀಯವಾಗಿ ಸ್ವಾಗತಿಸಿದರು. ರಂಗನಾಯಕುಲ ಮಂಟಪದಲ್ಲಿ ಅವರಿಗೆ ವೇದ ಮಂತ್ರಗಳ ಮೂಲಕ ಆಶೀರ್ವಾದ ನೀಡಿ, ತೀರ್ಥ ಪ್ರಸಾದ ಹಾಗೂ ದೇವರ ಪವಿತ್ರ ಶೇಷ ವಸ್ತ್ರವನ್ನು ನೀಡಿ ಗೌರವಿಸಲಾಯಿತು. ನಂತರ ದೇವಸ್ಥಾನದಲ್ಲಿ ಮುಡಿ ಕೊಟ್ಟ ಅನಂತ್ ಅಂಬಾನಿ ದೇವರ ದರ್ಶನ ಪಡೆದರು.
ಇದಕ್ಕೂ ಮುನ್ನ, ಜೂನ್ 12ರಂದು ಅನಂತ್ ಅಂಬಾನಿ ಅವರು ತಮ್ಮ ತಂದೆ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ತಮ್ಮ ಪತ್ನಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಜಂಟಿಯಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಮದುವೆಯ ಶುಭ ಸಂದರ್ಭದ ಮುನ್ನ ಕೂಡ ಇಡೀ ಕುಟುಂಬ ತಿರುಪತಿಗೆ ಬಂದು ದೇವರ ಆಶೀರ್ವಾದ ಪಡೆದಿತ್ತು. ಅನಂತ್ ಅಂಬಾನಿ ಅವರ ವಿವಾಹದ ಆಮಂತ್ರಣ ಪತ್ರಿಕೆಯನ್ನು ಕೂಡ ಮುಕೇಶ್ ಅಂಬಾನಿ ಅವರು ತಿರುಪತಿ ದೇವಸ್ಥಾನಕ್ಕೆ ತಂದು ದೇವರ ಪಾದದ ಮೇಲಿಟ್ಟು ವಿಶೇಷ ಪೂಜೆ ಸಲ್ಲಿಸಿದ್ದರು.