ನವದೆಹಲಿ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಮಲೈ ಬಿಜೆಪಿ ತೊರೆದಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ʻಬಿಜೆಪಿ ದೆಹಲಿ ಕೇಂದ್ರಿತ ನಿರ್ಧಾರಗಳಿಂದ ಬೇಸತ್ತಿದ್ದಾಗಿ ಹೇಳಿಕೊಂಡಿದ್ದು, ಈ ಭಿನ್ನಾಭಿಪ್ರಾಯದ ಕಾರಣ ಪಕ್ಷದಿಂದ ಹೊರ ಬರಬೇಕಾಯಿತು ಎಂದು ಹೇಳಿದ್ದಾರೆ, ಜೊತೆಗೆ ಗುಜರಾತ್ ಕೇಂದ್ರಿತ ಅಭಿವೃದ್ದಿ ಬಗ್ಗೆಯೂ ಟೀಕೆ ಮಾಡಿರುವ ಅಣ್ಣಮಲೈ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ನಿರ್ಧಾರಗಳನ್ನು ದೆಹಲಿಯಲ್ಲಿ ಕೂತು ತೆಗೆದುಕೊಳ್ಳುವ ಸಂಸ್ಕೃತಿ ಸರಿಯಲ್ಲ. ತಮಿಳುನಾಡಿನ ನೆಲದಲ್ಲೇ ಸ್ಥಳೀಯ ನಾಯಕತ್ವಕ್ಕೆ ಆದ್ಯತೆ ನೀಡುವ ರಾಜಕೀಯ ಶಕ್ತಿಯ ಅಗತ್ಯವಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರ ನಿವಾಸದಲ್ಲಿ ತಮಿಳುನಾಡು ಬಿಜೆಪಿಯ(Tamil Nadu) ಕೋರ್ ಕಮಿಟಿ ಸಭೆ ನಡೆದಿದ್ದು ತಮಗೆ ತೀವ್ರ ಬೇಸರ ತಂದಿತ್ತು. ರಾಜ್ಯದ ಯಾವುದೇ ಪಕ್ಷದ ಕೋರ್ ಕಮಿಟಿ ಸಭೆಯು ಅದೇ ರಾಜ್ಯದ ನೆಲದಲ್ಲೇ ನಡೆಯಬೇಕು ಎಂದಿದ್ದಾರೆ.
ಜೊತೆಗೆ ಗುಜರಾತ್ ಕೇಂದ್ರಿತ ಅಭಿವೃದ್ದಿಯನ್ನ ಅಣ್ಣಮಲೈ ಖಂಡಿಸಿದ್ದು, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಬಿಜೆಪಿ ಪಾಲಾಗುತ್ತಿವೆ, ಎಐ ಕಂಪನಿಗಳು, ಸೆಮಿ ಕಂಡೆಕ್ಟರ್ ಚಿಪ್, 2036ರ ಒಲಂಪಿಕ್ ಸೇರಿದಂತೆ ಹಲವು ಮಹತ್ವದ ಯೋಜನೆಗಳು ಗುಜರಾತ್‌ಗೆ ಮಾತ್ರ ಸೀಮಿತವಾಗಿದೆ, ಇಡೀ ದೇಶದ ಸಮಗ್ರ ಅಭಿವೃದ್ದಿ ಗುಜರಾತ್ ಕೇಂದ್ರಿತವಾಗಿರಬಾರದು ಎಂದು ಅಣ್ಣಾಮಲೈ ವಾದಿಸಿದ್ದಾರೆ,
ಇನ್ನು ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ ಅಣ್ಣಮಲೈ ʻಕರ್ನಾಟಕ ಅಣೆಕಟ್ಟು ನಿರ್ಮಿಸಲು ಅಧಿಕಾರವಿಲ್ಲ ಎಂದು ಕೇಂದ್ರ ಸರ್ಕಾರ 2021ರಲ್ಲೇ ಹೇಳಿತ್ತು, ಆದರೆ ಈಗ ಅದೇ ಸರ್ಕಾರ ಸಂಸತ್ತಿನಲ್ಲಿ ಕರ್ನಾಟಕಕ್ಕೆ ಅಣೆಕಟ್ಟು ನಿರ್ಮಿಸಲು ಅಗತ್ಯವಿಲ್ಲ ಎಂದು ಹೇಳಿದೆ. ಐದು ವರ್ಷಗಳಲ್ಲಿ ಈ ಬದಲಾವಣೆ ಏಕೆ? ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. 2028ರಲ್ಲಿ ಮೊದಲು ಕರ್ನಾಟಕದ ಚುನಾವಣೆ ಬರುತ್ತದೆ, ನಂತರ ತಮಿಳುನಾಡಿನ ಚುನಾವಣೆ ಬರಲಿದೆ. ಕೇವಲ ಚುನಾವಣೆಯನ್ನು ಮುಂದಿಟ್ಟುಕೊಂಡು ಸರ್ಕಾರಗಳು ಇಂತಹ ದ್ವಂದ್ವ ನಿಲುವುಗಳನ್ನು ತಳೆಯಬಾರದು ಎಂದು ಹೇಳಿದರು.