Search


ಮಹಿಳೆಯನ್ನು ಭೋಗದ ವಸ್ತುವಿನಂತೆ ನೋಡುವುದನ್ನ ನಿಲ್ಲಿಸಿ; ಟಾಕ್ಸಿಕ್ ಹೆಸರಳದೇ ಗರಂ ಅದ ಸಿಂಗಂ

ಚೆನ್ನೈ: ಇತ್ತೀಚಿನ ಸಿನಿಮಾಗಳಲ್ಲಿ ಮಿತಿಮೀರಿದ ಹಿಂಸಾಚಾರ, ಅಸಭ್ಯ ದೃಶ್ಯಗಳು ಹಾಗೂ ಮಹಿಳೆಯರನ್ನು ಭೋಗದ ವಸ್ತುವಿನಂತೆ ಬಿಂಬಿಸುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ರಾಜಕಾರಣಿ ಕೆ. ಅಣ್ಣಾಮಲೈ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ತನ್ನ ಜವಾಬ್ದಾರಿಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಯಾವುದೇ ನಿರ್ದಿಷ್ಟ ಸಿನಿಮಾದ ಹೆಸರನ್ನು ನೇರವಾಗಿ ಉಲ್ಲೇಖಿಸದ ಅಣ್ಣಾಮಲೈ, ಇತ್ತೀಚಿನ ಚಿತ್ರಗಳಲ್ಲಿ ಹೆಚ್ಚುತ್ತಿರುವ ಅತಿಯಾದ ಪುರುಷ ಪ್ರಧಾನ ಹಾಗೂ ಹಿಂಸಾತ್ಮಕ ಕಥಾಹಂದರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಶೀರ್ಷಿಕೆ ಮತ್ತು ಪರಿಕಲ್ಪನೆ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಅವರ ಹೇಳಿಕೆ ಗಮನ ಸೆಳೆದಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಭಾರತದಲ್ಲಿ ಸಿನಿಮಾಗಳ ಪ್ರಮಾಣೀಕರಣ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು. ಅಮೆರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳಲ್ಲಿ ವಯಸ್ಸಿನ ಆಧಾರದ ಮೇಲೆ ಸಿನಿಮಾಗಳಿಗೆ ವಿವಿಧ ವರ್ಗಗಳ ಪ್ರಮಾಣಪತ್ರ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಭಾರತದಲ್ಲೂ ಮಕ್ಕಳಿಗೆ ಸೂಕ್ತವಲ್ಲದ ದೃಶ್ಯಗಳ ಪ್ರದರ್ಶನದ ಬಗ್ಗೆ ಕಟ್ಟುನಿಟ್ಟಿನ ನಿಯಮ ಜಾರಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. 14, 16 ಅಥವಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸೂಕ್ತವಲ್ಲದ ದೃಶ್ಯಗಳು ಯಾವುದೇ ನಿಯಂತ್ರಣವಿಲ್ಲದೆ ಪ್ರದರ್ಶನಗೊಳ್ಳುತ್ತಿರುವುದು ಆತಂಕಕಾರಿ. ಇಂತಹ ಅಹಿತಕರ ದೃಶ್ಯಗಳಿಗೆ ಅಗತ್ಯವಿದ್ದಲ್ಲಿ ಕತ್ತರಿ ಹಾಕಬೇಕು ಎಂದು ಅಣ್ಣಾಮಲೈ ಒತ್ತಾಯಿಸಿದರು.

ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಅಣ್ಣಾಮಲೈ, ಯಾವುದೇ ಸಿನಿಮಾವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದು ತಮ್ಮ ಉದ್ದೇಶವಲ್ಲ ಎಂದರು. ಆದರೆ, ಸಿನಿಮಾಗಳಿಗೆ ಸೂಕ್ತ ಪ್ರಮಾಣಪತ್ರ ನೀಡುವುದರ ಜೊತೆಗೆ ಚಿತ್ರಮಂದಿರಗಳಲ್ಲಿ ವಯೋಮಿತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.ಕೆಲವು  ಚಿತ್ರಮಂದಿರಗಳಲ್ಲಿ ವಯಸ್ಸಿನ ಪರಿಶೀಲನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿಲ್ಲ. ಸ್ಟಾರ್ ನಟರು ಅಭಿನಯಿಸಿದ್ದಾರೆ ಎಂಬ ಕಾರಣಕ್ಕೆ ಸಿನಿಮಾದಲ್ಲಿರುವ ಪ್ರತಿಯೊಂದು ಅಂಶವನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ದೃಶ್ಯಗಳು ಯುವಕರು ಮತ್ತು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.

ಮಹಿಳೆಯರನ್ನು ಭೋಗದ ವಸ್ತುವಿನಂತೆ ತೋರಿಸುವುದಕ್ಕೆ ವಿರೋಧ 

ಸಿನಿಮಾಗಳಲ್ಲಿ ಮಹಿಳೆಯರ ಚಿತ್ರಣದ ಬಗ್ಗೆಯೂ ಅಣ್ಣಾಮಲೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದೆಡೆ ಮಹಿಳಾ ಸಬಲೀಕರಣ, ಮಹಿಳೆಯರ ಸುರಕ್ಷತೆ ಹಾಗೂ ಅವರ ಮೇಲಿನ ದೌರ್ಜನ್ಯದ ವಿರುದ್ಧ ಮಾತನಾಡುತ್ತೇವೆ. ಮತ್ತೊಂದೆಡೆ ಕೆಲವು ಸಿನಿಮಾಗಳಲ್ಲಿ ಮಹಿಳೆಯರನ್ನು ಕೇವಲ ಭೋಗದ ವಸ್ತುವಿನಂತೆ ಬಿಂಬಿಸಲಾಗುತ್ತಿದೆ. ಸಮಾಜದ ಮೇಲೆ ಚಿತ್ರರಂಗದ ಪ್ರಭಾವ ಅಪಾರವಾಗಿರುವುದರಿಂದ ಇಂತಹ ಚಿತ್ರಣಗಳು ತಪ್ಪು ಸಂದೇಶ ನೀಡಬಹುದು ಎಂದು ಅವರು ಹೇಳಿದರು.

ಸಿನಿಮಾಗಳಲ್ಲಿ ಹೆಚ್ಚುತ್ತಿರುವ ರಕ್ತಪಾತ, ಅತಿಯಾದ ಹಿಂಸಾಚಾರ, ಮಾದಕ ಸಂಸ್ಕೃತಿಯ ವೈಭವೀಕರಣ ಹಾಗೂ ನೈತಿಕ ಮೌಲ್ಯಗಳ ಕುಸಿತದ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅಣ್ಣಾಮಲೈ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಚಿತ್ರಗಳಿಗೆ ಸಂಪೂರ್ಣ ನಿಷೇಧ ಹೇರುವ ಬದಲು, ವಯೋಮಿತಿಗೆ ಅನುಗುಣವಾದ ಪ್ರಮಾಣೀಕರಣ, ಚಿತ್ರಮಂದಿರಗಳಲ್ಲಿ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ಜವಾಬ್ದಾರಿಯುತ ಚಿತ್ರಣಕ್ಕೆ ಆದ್ಯತೆ ನೀಡಬೇಕು ಎಂಬುದು ಅವರ ನಿಲುವಾಗಿದೆ.

By Ravikumar - 28-08-2026


Ads in Post