Search


ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಲು ಮುಂದಾದ ಅಣ್ಣಾಮಲೈ; ಏಕೆ ಗೊತ್ತಾ...!

ಚೆನ್ನೈ, : ಕಳೆದೊಂದು ತಿಂಗಳಿಂದ ಅನೀರಿಕ್ಷಿತ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ತಮಿಳುನಾಡಿನ ರಾಜಕೀಯ ರಂಗ, ಇದೀಗ ಮತ್ತೊಂದು ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡು ಮಾಜಿ ಬಿಜೆಪಿ ರಾಜ್ಯಧ್ಯಕ್ಷ ಅಣ್ಣಮಲೈ ಬಿಜೆಪಿ ತೊರೆದು, ಹೊಸ ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ(K Annamalai) ಹೊಸ ಪಕ್ಷ ಕಟ್ಟಲು ಸಿದ್ಧತೆ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಮಾನ ಮನಸ್ಕ ಜನರನ್ನು ಒಗ್ಗೂಡಿಸುವುದು ಮತ್ತು ತಳಮಟ್ಟದಲ್ಲಿ ಬಲಿಷ್ಠ ಸ್ವಯಂಸೇವಕರ ಪಡೆಯನ್ನು ನಿರ್ಮಿಸುವುದು ಈ ಆಂದೋಲನದ ಮುಖ್ಯ ಉದ್ದೇಶ ಎನ್ನಲಾಗಿದೆ. ಈ ಹೊಸ ಚಳವಳಿಗೆ “ಮಕ್ಕಳ್ ಶಕ್ತಿ ಇಯಕ್ಕಂ” (ಜನಶಕ್ತಿ ಆಂದೋಲನ) ಎಂದು ಹೆಸರಿಡಬಹುದು ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಮೋದಿ ವಿರುದ್ದವೇ ತಿರುಗಿ ಬೀಳ್ತಾರ ಅಣ್ಣಮಲೈ...!

ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾದ ದಿನದಿಂದಲೂ ಮೋದಿ ಸರ್ಕಾರದ ನೀತಿಯನ್ನ ಬೆಂಬಲಿಸುತ್ತಿದ್ದ ಅಣ್ಣಾಮಲೈ ಇದೀಗ ಕೇಂದ್ರದ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.  ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ಕುರಿತು ಅಣ್ಣಾಮಲೈ ಗರಂ ಆಗಿದ್ದು , ಸಿಬಿಎಸ್‌ಇ (CBSE) ಶಾಲೆಗಳಲ್ಲಿ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸಿ ಇತ್ತೀಚೆಗೆ ಹೊರಡಿಸಲಾದ ಆದೇಶವನ್ನು ಹಿಂಪಡೆಯಬೇಕೆಂದು ಅಣ್ಣಾಮಲೈ ಬಹಿರಂಗವಾಗಿ ಒತ್ತಾಯಿಸಿದ್ದಾರೆ.
ಈ ಕಡ್ಡಾಯ ನಿಯಮವು ತಮಿಳುನಾಡಿನ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅನಗತ್ಯ ಮಾನಸಿಕ ಒತ್ತಡ ಉಂಟುಮಾಡುತ್ತದೆ ಎಂದು ಆಕ್ಷೇಪಿಸಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಕೇಂದ್ರದ ನಿರ್ಧಾರವನ್ನು ಮುಕ್ತವಾಗಿ ಟೀಕಿಸಿದ್ದಾರೆ.

ಇತ್ತೀಚಿನ ಬೆಳವಣಿಗೆಗಳಿಂದ ನೊಂದಿದ್ದ ಅಣ್ಣಾಮಲೈ...!

ಎಐಎಡಿಎಂಕೆ ಮುಖ್ಯಸ್ಥ ಇ. ಪಳನಿಸ್ವಾಮಿ ಅವರು ಬಿಜೆಪಿ ರಾಜ್ಯ ನಾಯಕತ್ವವನ್ನು ಬದಲಾಯಿಸಬೇಕೆಂಬ ಕಟ್ಟುನಿಟ್ಟಿನ ಷರತ್ತು ವಿಧಿಸಿದ್ದ ಹಿನ್ನಲೆ ಅಣ್ಣಾಮಲೈ ಅವರ ಬದಲಿಗೆ ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಮೈತ್ರಿಯಿಂದ ಬೇಸರಗೊಂಡಿದ್ದ ಅಣ್ಣಾಮಲೈ  ಚುನಾವಣೆಗೆ ಸ್ಪರ್ಧಿಸದೆ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡಿದ್ದರು.

ಆದರೆ ನಂತರ ಕೇಂದ್ರ ನಾಯಕರ ಮನವಿಯ  ಮೇರೆಗೆ ಮೈತ್ರಿ ಅಭ್ಯರ್ಥಿಗಳ ಪರವಾಗಿ ಅಣ್ಣಮಲೈ ಪ್ರಚಾರ ನಡೆಸಿದ್ದರು, ಆದರೆ ಇದೀಗ ಅಣ್ಣಾಮಲೈ ಬಿಜೆಪಿ ತೊರೆದು, ತಮಿಳು ನೆಲದಲ್ಲಿ ಜನಾಂದೋಲನ ಕಟ್ಟಲು ವೇದಿಕೆ ಸಿದ್ದಪಡಿಸಿದ್ದು, ಈ ಮೂಲಕ ತಮಿಳುನಾಡಿನಲ್ಲಿ ಅರಳುತ್ತಿದ್ದ ಕಮಲದ ಮೊಗ್ಗನ್ನ ಚಿವುಟಿ ಹಾಕಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಇದೀಗ ಅಣ್ಣಾಮಲೈ ಅಮಿತ್‌ ಷಾ ಮತ್ತು ಬಿಜೆಪಿ ರಾಷ್ಟ್ರಧ್ಯಕ್ಷ ನಿತಿನ್‌ ನಬೀನ್‌ ಅವರ ಭೇಟಿಗೆ ಸಮಯ ಕೇಳಿದ್ದು ದೆಹಲಿಗೆ ತೆರಳಿದ್ದಾರೆ, ದೆಹಲಿ ನಾಯಕರ ಭೇಟಿಯ ನಂತರ, ಅಣ್ಣಾಮಲೈ ತಮ್ಮ ನಿರ್ಧಾರವನ್ನ ಜೂನ್‌ 4ರಂದು, ಅಂದರೆ ಅವರ ಹುಟ್ಟುಹಬ್ಬದ ದಿನ ತಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

By Ravikumar - 01-06-2026


Ads in Post