ನವದೆಹಲಿ: ಎಥೆನಾಲ್ ಮಿಶ್ರಿತ (E20) ಪೆಟ್ರೋಲ್ ಜಾರಿಯನ್ನು ವಿರೋಧಿಸಿ ದೆಹಲಿಯ ಟ್ಯಾಕ್ಸಿ ಹಾಗೂ ಪ್ರವಾಸಿ ಸಾರಿಗೆ ಸಂಸ್ಥೆಗಳು ಸಂಸತ್ತಿನತ್ತ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿವೆ. ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳ ಕಾರ್ಯಕ್ಷಮತೆ ಕುಸಿಯುತ್ತಿದ್ದು, ಮೈಲೇಜ್ ಕಡಿಮೆಯಾಗುತ್ತಿದೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ. ಕಾಕ್ರೋಚ್ ಪಾರ್ಟಿ ಹೋರಾಟ ಮುಗಿಯುತ್ತಿದ್ದಂತೆ ಮೋದಿ ಸರ್ಕಾರಕ್ಕೆ ಮತ್ತೊಂದು ತಲೆ ನೋವು ಶುರುವಾಗಿದ್ದು. ಈ ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ತೆಗೆದುಕೊಳ್ಳಲಿದೆ ಎಂಬುದನ್ನ ಕಾಡುನೋಡಬೇಕಿದೆ.
ದೆಹಲಿ ಟ್ಯಾಕ್ಸಿ ಮತ್ತು ಪ್ರವಾಸಿ ಸಾರಿಗೆ ಸಂಘಟನೆಗಳ ಒಕ್ಕೂಟ ಆಗಸ್ಟ್ 4ರಂದು "ಸಂಸತ್ ಚಲೋ" ಪ್ರತಿಭಟನೆ ನಡೆಸಲಿದ್ದು, ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಣ ನೀತಿಯನ್ನು ತಕ್ಷಣ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದೆ. ಈ ನೀತಿಯನ್ನು ಸ್ವತಂತ್ರ ವೈಜ್ಞಾನಿಕ ತಜ್ಞರ ಸಮಿತಿ ಮೂಲಕ ಪರಿಶೀಲಿಸುವಂತೆ ಒತ್ತಾಯಿಸಲಾಗಿದೆ. ಟ್ಯಾಕ್ಸಿ ಸಾರಿಗೆ ಸಂಸ್ಥೆಗಳು ಕೇಂದ್ರ ಸರ್ಕಾರದ ಮುಂದೆ ಹಲವಾರು ಬೇಡಿಕೆಗಳನ್ನ ಇರಿಸುದ್ದು, ಅವುಗಳಲ್ಲಿ ಪ್ರಮುಖ ಬೇಡಿಕೆಯೆಂದರೆ.
ಸಂಘಟನೆಗಳ ಪ್ರಮುಖ ಬೇಡಿಕೆಗಳು
1. ಎಥೆನಾಲ್ ಮಿಶ್ರಣ (E20) ನೀತಿಯ ಸ್ವತಂತ್ರ ವೈಜ್ಞಾನಿಕ ಪರಿಶೀಲನೆ.
2. ಹಳೆಯ ವಾಹನಗಳ ಮೇಲಿನ ಪರಿಣಾಮದ ಬಗ್ಗೆ ಸ್ಪಷ್ಟ ಅಧ್ಯಯನ.
3. ವಾಹನಗಳಿಗೆ ಕಡ್ಡಾಯಗೊಳಿಸಿರುವ ಪ್ಯಾನಿಕ್ ಬಟನ್ ಹಾಗೂ ವಾಹನ ಲೊಕೇಶನ್ ಟ್ರ್ಯಾಕಿಂಗ್ ಸಾಧನ (VLTD) ನಿಯಮಗಳ ಮರುಪರಿಶೀಲನೆ.
4. ಪ್ರವಾಸಿ ವಾಹನಗಳಿಗೆ ವಿಧಿಸಿರುವ 80 ಕಿ.ಮೀ./ಗಂ. ವೇಗ ಮಿತಿಯಲ್ಲಿ ಬದಲಾವಣೆ.
5. ವಾಹನ ಸ್ಕ್ರ್ಯಾಪೇಜ್ ನೀತಿ ಮತ್ತು BS-IV ಡೀಸೆಲ್ ವಾಹನಗಳ ಮೇಲಿನ ನಿರ್ಬಂಧಗಳನ್ನು ಹಿಂಪಡೆಯುವುದು.
6. ಟೋಲ್ ಶುಲ್ಕದಲ್ಲಿ ಕಡಿತ.
ಸರ್ಕಾರವು ವಾಹನ ತಯಾರಕರು, ತಾಂತ್ರಿಕ ತಜ್ಞರು ಹಾಗೂ ಸಾರಿಗೆ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಎಥೆನಾಲ್ ಮಿಶ್ರಣ ನೀತಿಯಲ್ಲಿ ಅಗತ್ಯ ಬದಲಾವಣೆಗಳನ್ನು ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಂಚಾರ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.