Search


ಪ್ರದೀಪ್ ಈಶ್ವರ್ ವಿರುದ್ಧ ಅರೆಸ್ಟ್ ವಾರಂಟ್: ಪ್ರತಾಪ್ ಸಿಂಹ ಮಾನನಷ್ಟ ಪ್ರಕರಣದಲ್ಲಿ ಕೋರ್ಟ್ ಕ್ರಮ

ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿ ಮಾಡಿದೆ. ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ದಾಖಲಿಸಿದ್ದ ಮಾನನಷ್ಟ ಪ್ರಕರಣದ ವಿಚಾರಣೆಗೆ ಪ್ರದೀಪ್ ಈಶ್ವರ್ ಗೈರುಹಾಜರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. 

ಪ್ರಕರಣವು 2024ರ ಜನವರಿ 11ರಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಮಾಧ್ಯಮ ಸಂವಾದದ ವೇಳೆ ಪ್ರತಾಪ್ ಸಿಂಹ ವಿರುದ್ಧ ಪ್ರದೀಪ್ ಈಶ್ವರ್ ನೀಡಿದ್ದರೆನ್ನಲಾದ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದೆ. ಈ ಹೇಳಿಕೆಗಳ ವಿರುದ್ಧ ಪ್ರತಾಪ್ ಸಿಂಹ ಅವರು 2024ರ ಫೆಬ್ರವರಿ 22ರಂದು ಮಾನನಷ್ಟ ದೂರು ದಾಖಲಿಸಿದ್ದರು.  ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದ್ದರೂ, ಪ್ರದೀಪ್ ಈಶ್ವರ್ ಹಾಗೂ ಅವರ ಪರ ವಕೀಲರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ನಿಗದಿಪಡಿಸಲಾಗಿದೆ. 

ಇಬ್ಬರ ನಡುವೆ ವಾಕ್ಸಮರ 

ಪ್ರತಾಪ್ ಸಿಂಹ ಮತ್ತು ಪ್ರದೀಪ್ ಈಶ್ವರ್ ನಡುವೆ ಈ ಹಿಂದೆ ತೀವ್ರ ವಾಕ್ಸಮರ ನಡೆದಿತ್ತು. ಪ್ರತಾಪ್ ಸಿಂಹ ಅವರು ಪ್ರದೀಪ್ ಈಶ್ವರ್ ವಿರುದ್ಧ ಟೀಕೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ್ದ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ಅವರ ಹೆಸರು ಹಾಗೂ ಕುಟುಂಬದ ಹಿನ್ನೆಲೆಯನ್ನು ಉಲ್ಲೇಖಿಸಿ ವ್ಯಂಗ್ಯಭರಿತ ಹೇಳಿಕೆ ನೀಡಿದ್ದರು. ಇದೇ ಹೇಳಿಕೆಗಳ ಹಿನ್ನೆಲೆಯಲ್ಲಿ ಮಾನನಷ್ಟ ಪ್ರಕರಣ ದಾಖಲಾಗಿತ್ತು.

By Ravikumar - 25-08-2026


Ads in Post