ಹಲವರಿಗೆ ಬಾಹ್ಯದಲಿ, ಕೆಲವರಿಗೆ ಆಂತರ್ಯದಲಿ.ತಂದೆಗೆ ಮಗಳಿನ ತುಂಟಾಟದಲಿ,ಅಣ್ಣನಿಗೆ ತಂಗಿಯ ಹುಸಿಗೋಪದಲಿ,ಪ್ರೇಮಿಗೆ ಕಡೆಗಣ್ಣ ಕುಡಿನೋಟದಲಿ, ಕಾಮಿಗೆ ಹಸಿದಾದ ಮೈಮಾಟದಲಿ,ಪತಿಗೆ ಹಸನಾದ ದಾಂಪತ್ಯದಾಟದಲಿ,ಚಿರಕಾಲ ಒಡಗೂಡುವ ಸತಿಯ ಪರಿಪಾಠದಲಿ, ಹೆಣ್ಣಿಗೆ ತನ್ನ ತಾಯ್ತನದಿ ರಜತಗರ್ಭದ ಒಳಗೆ ಪವಡಿಸಿದ ಕಂದಮ್ಮನ ಬಯಕೆಯ ಬೆಸುಗೆಯಲಿ.ಚಿಗುರಿದ.ಕೂಸಿಗೆ ತನ್ನಮ್ಮನ ಪ್ರೀತಿಯ ಅಪ್ಪುಗೆಯ ಪರಿಧಿಯಲಿ, ಎಣೆಯಿಲ್ಲದ ಮಮತೆಯ ಶರಧಿಯಲಿ. ತೊಟ್ಟಿಲು ತೂಗುತ್ತಾ ಜಗವ ಆಳುವ ಕೈಗಳಲಿ ಅವಿತಿರುವ ಧೈರ್ಯದಲ್ಲಿ, ಜವರಾಯನನ್ನೇ ಜರ್ಝರಿತಗೊಳಿಸುವ ಮನದ ಸ್ಥೈರ್ಯದಲಿ.
ನವಿರಾದ ನಲ್ಮೊಗದ ನಾಚಿಕೆಯಲಿ,ಮುಗುಳ್ನಕ್ಕ ಮೂಗುತಿಯ ಮುಗ್ಧತೆಯಲಿ,ಬಳುಕುವ ಬಳ್ಳಿಯ ನಡಿಗೆಯಲಿ,ತಗ್ಗುವ ತಾಳ್ಮೆಯ ನಡತೆಯಲಿ, ಮುಡಿದ ಮಲ್ಲಿಗೆ ಕಂಪಿನಲಿ, ನುಡಿದ ವಾಣಿಯ ಇಂಪಿನಲಿ,ಮಂದಹಾಸದ ಮಾಯೆಯಲಿ, ಚಂದ್ರಹಾಸದ( ಖಡ್ಗ ಎಂದರ್ಥ) ನೋಟದ ಛಾಯೆಯಲಿ, ..ಹೀಗೆ ಹೆಣ್ಣು ವಿಸ್ಮಯವೋ.. ವಿಚಿತ್ರವೋ.. ವಿಶೇಷವೋ ನಾನರಿಯೆ.ಹೆಣ್ಣಿನ ಸೃಷ್ಟಿಯ ಸೌಂದರ್ಯದ ಮರ್ಮವ ನಾ ತಿಳಿಯೆ.ವನಿತೆಯ ವಿಚಾರಗಳ ವಿವರಿಸುವ ವಿಜ್ಞಾನವಿದ್ದರೆ ತಿಳಿಸಿ.
ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಕಲಾವಿದ ಕಂಡ.ಉಂಡಿದ್ದು ಉಂಡವನಿಗೆ, ಕಂಡಿದ್ದು ಕಂಡವನಿಗೆ. ಸರ್ವವ್ಯಾಪಿಯಾದ ಸೌಂದರ್ಯವ,ನಿಮ್ಮ ಯೋಚನೆ, ಮನದಲ್ಲಿ ಸ್ಥಾಯಿ ಮಾಡಿದ ರೀತಿಯೇ ನಿಮಗೆ ಕಣ್ಣಿಗೆ ಗೋಚರಿಸುವುದು.ನೂಲಿಗೆ ತಕ್ಕಂತೆ ಟೋಪಿ,ಅಭಿರುಚಿಗೆ ತಕ್ಕಂತೆ ಅಭಿವ್ಯಕ್ತತೆ.
. ಹೆಣ್ಣು ಸಹನಶೀಲೆ,ಹೆಣ್ಣು ಮುಂಗೋಪಿ, ಹೆಣ್ಣು ಸುಂದರಳು , ಹೆಣ್ಣು ಕುರೂಪಿ...ಹೆಂಡದವನಿಗೆ ಹೆಂಡ ಕಂಡಿತು, ಕೆಂಡದವನಿಗೆ ಕೆಂಡ ಕಂಡಿತು, ಗಂಧದವನಿಗೆ ಗಂಧ ಕಂಡಿತು. ಹೀಗೇ ಎಲ್ಲವೂ ಕೂಡ. …ಸೌಂದರ್ಯ ನಿಮ್ಮ ಕಂಗಳಲ್ಲಿ ನೆಲೆ ನಿಂತಿದೆ.ನಿಮ್ಮ ವ್ಯಕ್ತಿತ್ವದ ಕೈಗನ್ನಡಿಯಾಗಿ ನಿಮ್ಮ ಮುಗ್ಧತೆಯ ಮುನ್ನುಡಿಯಾಗಿ
( ಎಲ್ಲರಿಗೂ ಈ ಉತ್ತರ ಅನ್ವಯವಾಗದೆ ಇರಬಹುದು. ಅಪವಾದ ಎಲ್ಲದಕ್ಕೂ ಉಂಟು.ಆದರೂ ಬಹುತೇಕರಿಗೆ ಆಗುವುದು.)
ನಿಮ್ಮನ್ನೇ ಕೇಳಿದೆ ನಾನು ಈಗ ಈ ಸ್ತ್ರೀಯರ ಸೌಂದರ್ಯದ ಚಿದಂಬರ ರಹಸ್ಯವ ಅರಿಯದೇ. ಹೆಣ್ಣಿಗೆ ಸೌಂದರ್ಯ ಎಲ್ಲಿರುತ್ತದೆ?…ಎಂದು. ನನ್ನ ಉತ್ತರ ನಿಮ್ಮ ಕಣ್ಣಿನ ಸಮಷ್ಟಿಯ ಬಿಂದು. ಆದರೂ ಗೊಂದಲದ ಗೂಡಾಗಿ ಪುನಃ ಅದೇ ಪ್ರಶ್ನೆಗೆ ಬೀಳುವೆ ಬಂದು ಬಂದು. ..!! ಚೆನ್ನಿಗನೇ ನಿನ್ನಲ್ಲೇ ಚರ್ಚಿಸಿದೆ ನಾ ಹೆಂಗಳೆಯ ಚೆಲುವು ಯಾವುದೆಂದು.? ಎಲೆಬಾಲೆಯ ಸೊಬಗು ಎಲ್ಲಿಹುದೆಂದು?…ಹೇಳಬಲ್ಲೆಯಾ??…