ಅಸ್ಸಾಂ ಸರ್ಕಾರದ ಕಂದಾಯ ಸಚಿವ ಹಾಗೂ ಎಜಿಪಿ (AGP) ಹಿರಿಯ ನಾಯಕ ಕೇಶವ್ ಮಹಾಂತ ಅವರ ಪುತ್ರಿ ದಿಬಿಸಾ ಮಹಾಂತ ಗುವಾಹಟಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿರುವುದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.
ವಿದ್ಯಾರ್ಥಿಗಳು ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು. ಪ್ರತಿಭಟನೆಯಲ್ಲಿ ದಿಬಿಸಾ ಮಹಾಂತ ಕೂಡ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು. ಇದೀಗ ಈ ವಿಚಾರದ ಬಗ್ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಪ್ರತಿಕ್ರಿಯೆ ನೀಡಿದ್ದು. ದಿಬಿಸಾ ಮಹಾಂತ ಅವರ ಪ್ರತಿಭಟನೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರತಿಕ್ರಿಯೆ ನೀಡಿ, "ಒಬ್ಬ ಮಗಳ ರಾಜಕೀಯ ಅಭಿಪ್ರಾಯಗಳು ತಂದೆಯ ಅಭಿಪ್ರಾಯಗಳಂತೆಯೇ ಇರಬೇಕೆಂಬುದಿಲ್ಲ. ಈ ಕಾರಣಕ್ಕೆ ಸಚಿವ ಕೇಶವ್ ಮಹಾಂತ ಅವರನ್ನು ಟೀಕಿಸಬೇಡಿ. ಆದರೆ ದಿಬಿಸಾ ಹೇಳಿರುವ ಕೆಲವು ಮಾತುಗಳಿಗೆ ನಾನು ಒಪ್ಪುವುದಿಲ್ಲ" ಎಂದು ಹೇಳಿದ್ದಾರೆ.
ಈ ಘಟನೆ ಆಡಳಿತಾರೂಢ ಮೈತ್ರಿಕೂಟದ ಸಚಿವರ ಕುಟುಂಬದ ಸದಸ್ಯೆಯೇ ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿರುವುದರಿಂದ ವಿಶೇಷ ರಾಜಕೀಯ ಮಹತ್ವ ಪಡೆದುಕೊಂಡಿದೆ. ವಿದ್ಯಾರ್ಥಿ ಚಳವಳಿಗೆ ವಿವಿಧ ರಾಜ್ಯಗಳಿಂದ ಬೆಂಬಲ ವ್ಯಕ್ತವಾಗುತ್ತಿರುವ ನಡುವೆಯೇ ಈ ಬೆಳವಣಿಗೆ ಗಮನ ಸೆಳೆದಿದೆ.