ರಾಮನಗರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪುತ್ರನನ್ನು ರಾಜಕೀಯವಾಗಿ ಮುನ್ನೆಲೆಗೆ ತರಲು, ತಮ್ಮ ಸಹೋದರನ ಪುತ್ರ ಪ್ರಜ್ವಲ್ ರೇವಣ್ಣ ಅವರನ್ನು ರಾಜಕೀಯವಾಗಿ ಮುಗಿಸಿದ್ದಾರೆ ಎಂದು ಸಚಿವ ಎಚ್.ಸಿ. ಬಾಲಕೃಷ್ಣ ಆರೋಪಿಸಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ, ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಎಂಬುದನ್ನು ಮರೆತು ಪಂಚಾಯಿತಿ ಸದಸ್ಯರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ನೈಸ್ ಮತ್ತು ಕೆಪಿಎಸ್‌ಸಿ ಅಕ್ರಮಗಳನ್ನು ಮುಚ್ಚಿಹಾಕಲು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್ ಪ್ರಕರಣಕ್ಕೂ ನೈಸ್-ಕೆಪಿಎಸ್‌ಸಿ ವಿಚಾರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಈ ವಿಚಾರವನ್ನು ಪದೇಪದೇ ಪ್ರಸ್ತಾಪಿಸುವ ಮೂಲಕವೇ ಪ್ರಜ್ವಲ್ ಅವರನ್ನು ಜೈಲಿಗೆ ಕಳುಹಿಸಲಾಯಿತು ಎಂದು ತಿರುಗೇಟು ನೀಡಿದರು.
ಪ್ರಜ್ವಲ್ ರೇವಣ್ಣ ಜೈಲಿನಲ್ಲೇ ಇರಬೇಕು ಹಾಗೂ ಅವರನ್ನು ರಾಜಕೀಯವಾಗಿ ದೂರ ಸರಿಸಿ ತಮ್ಮ ಪುತ್ರನನ್ನು ಪ್ರತಿಷ್ಠಾಪಿಸಬೇಕು ಎಂಬುದೇ ಕುಮಾರಸ್ವಾಮಿ ಅವರ ಉದ್ದೇಶ ಎಂದು ಬಾಲಕೃಷ್ಣ ಆರೋಪಿಸಿದರು. ಪ್ರಜ್ವಲ್ ಬಳಿ ಮೊಬೈಲ್ ಹೇಗೆ ಬಂತು ಎಂಬ ಬಗ್ಗೆ ಅನುಮಾನವಿದ್ದರೆ ಸಿಬಿಐ ತನಿಖೆಗೆ ಪತ್ರ ಬರೆಯಲಿ ಎಂದು ಸವಾಲು ಹಾಕಿದರು.
ರಾಜ್ಯ ಸರ್ಕಾರದ 100ನೇ ದಿನದ ಸಾಧನಾ ಕಾರ್ಯಕ್ರಮವನ್ನು ಕುಮಾರಸ್ವಾಮಿ ವ್ಯಂಗ್ಯವಾಡಿರುವ ಕುರಿತೂ ಪ್ರತಿಕ್ರಿಯಿಸಿದ ಬಾಲಕೃಷ್ಣ, “ಪ್ರಪಂಚದಲ್ಲಿ ಕುಮಾರಸ್ವಾಮಿ ಒಬ್ಬರೇ ಮೇಧಾವಿ, ಉಳಿದವರೆಲ್ಲ ದಡ್ಡರು ಎಂಬ ಮನಸ್ಥಿತಿ ಅವರದ್ದು” ಎಂದು ಟೀಕಿಸಿದರು. “ನಾನು ಹುಟ್ಟಿದ್ದೇ ಬಡವರಿಗಾಗಿ” ಎಂಬ ಅವರ ನಿಲುವಿನ ಬಗ್ಗೆ ನಾವೇನೂ ಮಾತನಾಡಲು ಸಾಧ್ಯವಿಲ್ಲ ಎಂದರು.