Search


ಬಳ್ಳಾರಿ ಬಿಜೆಪಿ ಸಮಾವೇಶಕ್ಕೆ ಮೈದಾನ ಸಿಗಲಿಲ್ಲ; 2015ರ ನಿಯಮ ಮುಂದಿಟ್ಟ ಅಧಿಕಾರಿಗಳು

ಬಳ್ಳಾರಿ: ಬಿಜೆಪಿ ಬಳ್ಳಾರಿ ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ ಬಳಸಲು ಅನುಮತಿ ನಿರಾಕರಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 2015ರಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶವನ್ನು ಉಲ್ಲೇಖಿಸಿ, ಸೆಪ್ಟೆಂಬರ್ 10ರಂದು ನಡೆಯಬೇಕಿದ್ದ ಬಿಜೆಪಿಯ ಬೃಹತ್ ಬಹಿರಂಗ ಸಮಾವೇಶಕ್ಕೆ ಮೈದಾನ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಎಕ್ಸ್ ಮುನ್ಸಿಪಲ್ ಶಾಲೆ) ಮೈದಾನದಲ್ಲಿ ಸೆಪ್ಟೆಂಬರ್ 10ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಸಮಾವೇಶ ನಡೆಸಲು ಅನುಮತಿ ನೀಡುವಂತೆ ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರು ಸೆಪ್ಟೆಂಬರ್ 7ರಂದು ಮನವಿ ಸಲ್ಲಿಸಿದ್ದರು. ಪಾದಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ಈ ಬೃಹತ್ ಸಮಾವೇಶವನ್ನು ಆಯೋಜಿಸಲು ಬಿಜೆಪಿ ಯೋಜಿಸಿತ್ತು.

ಸಮಾವೇಶದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಸುಮಾರು 50 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದೂ ಉಲ್ಲೇಖಿಸಲಾಗಿತ್ತು.

ಆದರೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು 2015ರ ಜೂನ್ 11ರಂದು ಹೊರಡಿಸಿದ್ದ ಅಧಿಕೃತ ಸುತ್ತೋಲೆಯನ್ನು ಉಲ್ಲೇಖಿಸಿ ಬಳ್ಳಾರಿ-ವಿಜಯನಗರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಮೈದಾನ ಹಾಗೂ ಕಟ್ಟಡಗಳನ್ನು ಖಾಸಗಿ ಸಂಘ-ಸಂಸ್ಥೆಗಳ ಸಾರ್ವಜನಿಕ ಅಥವಾ ಖಾಸಗಿ ಸಮಾರಂಭಗಳು, ಪ್ರದರ್ಶನಗಳು, ವ್ಯಾಪಾರ ಮಳಿಗೆಗಳು ಮತ್ತು ಮನೋರಂಜನಾ ಕಾರ್ಯಕ್ರಮಗಳಿಗೆ ನೀಡಬಾರದು ಎಂಬ ನಿಯಮವನ್ನು ಇಲಾಖೆ ಉಲ್ಲೇಖಿಸಿದೆ.

ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳುವ ಅವಕಾಶವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದೇ ಕಾರಣದಿಂದ ಬಿಜೆಪಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಸರ್ಕಾರಿ ಶಾಲೆಗಳು, ಪಿಯು ಕಾಲೇಜುಗಳ ಮೈದಾನಗಳು, ಉದ್ಯಾನವನಗಳು ಸೇರಿದಂತೆ ಸರ್ಕಾರಿ ಆಸ್ತಿಗಳಲ್ಲಿ ಖಾಸಗಿ ಕಾರ್ಯಕ್ರಮ ಅಥವಾ ಸಮಾವೇಶ ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯಗೊಳಿಸುವ ಸಂಬಂಧ ಕಳೆದ ವರ್ಷದ ಅಕ್ಟೋಬರ್ 18ರಂದು ಸಚಿವ ಸಂಪುಟ ನಿರ್ಧಾರ ಕೈಗೊಂಡಿತ್ತು. ಈ ಸಂಬಂಧ ಹೊರಡಿಸಲಾದ ಮಾರ್ಗಸೂಚಿಗಳನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಧಾರವಾಡ ಪೀಠವು ಈ ಹಿಂದೆ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವುದಾಗಿ ತಿಳಿದುಬಂದಿದೆ.

ಈ ಬೆಳವಣಿಗೆಗಳ ನಡುವೆ, 2015ರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆದೇಶವನ್ನು ಆಧರಿಸಿ ಬಿಜೆಪಿ ಸಮಾವೇಶಕ್ಕೆ ಮೈದಾನ ಬಳಸಲು ಅನುಮತಿ ನಿರಾಕರಿಸಿರುವುದು ಇದೀಗ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

By Ravikumar - 08-09-2026


Ads in Post