Search


ಕಾಳಿ ಮಂದಿರದಲ್ಲಿ ಮೀನು ಸೇವಿಸಿದ ಬಂಗಾಳ ಸಿಎಂ ಸುವೇಂದು ಅಧಿಕಾರಿ; ವಿವಾದಕ್ಕೆ ತೆರೆ

ದೇಶದ ಹಲವು ಭಾಗಗಳಲ್ಲಿ ದೇವಸ್ಥಾನ ಅಥವಾ ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವಿಸುವುದು ವಿವಾದಕ್ಕೆ ಕಾರಣವಾಗಬಹುದು. ಆದರೆ ಪಶ್ಚಿಮ ಬಂಗಾಳದ ಹಲವು ದೇವಾಲಯಗಳಲ್ಲಿ ಮೀನು ಹಾಗೂ ಮಾಂಸವನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಪ್ರಸಾದವಾಗಿ ಸೇವಿಸುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಐತಿಹಾಸಿಕ ಕಾಳಿಘಾಟ್ ದೇವಾಲಯದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮೀನಿನ ಭೋಗ್ ಸೇವಿಸಿರುವುದು ಇದೀಗ ಗಮನ ಸೆಳೆದಿದೆ.

ಶಾಕ್ತ ಪಂಥದ ಹಿಂದೂಗಳು ಅತ್ಯಂತ ಪವಿತ್ರವೆಂದು ಪರಿಗಣಿಸುವ ‘ಕೌಶಿಕಿ ಅಮಾವಾಸ್ಯೆ’ ಹಿನ್ನೆಲೆಯಲ್ಲಿ ಸುವೇಂದು ಅಧಿಕಾರಿ ಅವರು ಕಾಳಿಘಾಟ್ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಾಲಯದಲ್ಲಿ ನೆಲದ ಮೇಲೆ ಕುಳಿತು ದೇವಿಗೆ ಅರ್ಪಿಸಲಾಗಿದ್ದ ಸಾಂಪ್ರದಾಯಿಕ ಭೋಗ್ ಸೇವಿಸಿದರು. ಅವರ ಊಟದ ತಟ್ಟೆಯಲ್ಲಿ ಕಾಳಿಘಾಟ್‌ನ ವಿಶೇಷತೆಯಾದ ದೊಡ್ಡ ಮೀನಿನ ತಲೆ, ಕರಿದ ಮೀನು ಹಾಗೂ ಬಸಂತಿ ಪುಲಾವ್ ಇದ್ದವು. ಈ ದೃಶ್ಯದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕಾಳಿಘಾಟ್ ದೇವಾಲಯದಲ್ಲಿ ದೇವಿಗೆ ಮೀನು ಹಾಗೂ ಮೇಕೆ ಮಾಂಸವನ್ನು ಅರ್ಪಿಸುವ ಸಂಪ್ರದಾಯವಿದೆ. ಬಳಿಕ ಭಕ್ತರು ಅದನ್ನು ಪ್ರಸಾದವಾಗಿ ಸೇವಿಸುತ್ತಾರೆ. ಇದೇ ಸಂದರ್ಭದಲ್ಲಿ ದುರ್ಗಾ ಪೂಜೆಯ ವೇಳೆ ಮಾಂಸಾಹಾರ ಸೇವಿಸುವ ಬಂಗಾಳಿ ಹಿಂದೂಗಳ ವಿರುದ್ಧ ಇತ್ತೀಚೆಗೆ ಕೆಲವು ಧಾರ್ಮಿಕ ಮುಖಂಡರು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ಬಾಗೇಶ್ವರ್ ಧಾಮದ ಧೀರೇಂದ್ರ ಶಾಸ್ತ್ರಿ ಅವರು ದುರ್ಗಾ ಪೂಜೆಯ ಸಂದರ್ಭದಲ್ಲಿ ಮಾಂಸಾಹಾರ ಸೇವಿಸುವ ಬಂಗಾಳಿ ಹಿಂದೂಗಳನ್ನು ಟೀಕಿಸಿದ್ದರು.

ಈ ವಿವಾದದ ನಡುವೆ ಸುವೇಂದು ಅಧಿಕಾರಿ ಅವರ ಮೀನಿನ ಭೋಗ್ ಸೇವನೆಯನ್ನು ಉಲ್ಲೇಖಿಸಿರುವ ಬಿಜೆಪಿ, ಬಂಗಾಳದ ಆಹಾರ ಪದ್ಧತಿ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸಬೇಕು ಎಂದು ಹೇಳಿದೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಬಂಗಾಳದ ನಂಬಿಕೆ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಗೌರವಿಸುವ ನಿಟ್ಟಿನಲ್ಲಿ ಸುವೇಂದು ಅಧಿಕಾರಿ ಕಾಳಿಘಾಟ್‌ನಲ್ಲಿ ಸಾಂಪ್ರದಾಯಿಕ ಮೀನಿನ ಭೋಗ್ ಸೇವಿಸಿದ್ದಾರೆ ಎಂದು ಹೇಳಿದ್ದಾರೆ. ಸಸ್ಯಾಹಾರ–ಮಾಂಸಾಹಾರದ ಕುರಿತಾದ ವಿವಾದಕ್ಕೆ ಇದೇ ಹಂತದಲ್ಲಿ ತೆರೆ ಬೀಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

By Ravikumar - 11-09-2026


Ads in Post