Search


ಆಲಿಕಲ್ಲು ಮಳೆಗೆ ಬೆಂಗಳೂರು ಅಸ್ತವ್ಯಸ್ತ: ದರೆಗುರುಳಿದ ಮರ, ವಿವಿಧೆಡೆ ಜಲಾವೃತ...!

ಬೆಂಗಳೂರಿನಲ್ಲಿ ಭಾರೀ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಹವಾಮಾನ ಇಲಾಖೆಯು ಮುಂದಿನ 7 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಿದೆ. ನಾಳೆಯೂ ಬೆಂಗಳೂರಿಗೆ ಆಲಿಕಲ್ಲು ಮಳೆಯಾಗಲಿದೆ.

ಕಳೆದೊಂದು ತಿಂಗಳಿನಿಂದ ಬಿಸಿಲಿನಿಂದ ಕಾದು ಕೆಂಡವಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುಧವಾರ ಸಂಜೆ ಭಾರೀ ಗಾಳಿ, ಗುಡುಗು-ಸಿಡಿಲು ಸಹಿತ ಭರ್ಜರಿ ಆಲಿಕಲ್ಲು ಮಳೆಯಾಗಿದೆ. ಇದರಿಂದ ನೂರಾರು ಮರಗಳು ಧರೆಗುರುಳಿವೆ. ಹಲವು ಅಂಡರ್‌ಪಾಸ್‌ಗಳು ಜಲಾವೃತವಾಗಿವೆ. ಹಲವು ಕಚೇರಿಗಳಿಗೆ, ಮನೆಗಳು ಮಳೆ ನೀರು ನುಗ್ಗಿ ಹಾನಿಗೀಡಾಗಿವೆ. ಇದರ ಜೊತೆಗೆ, ಮುಂದಿನ 7 ದಿನಗಳ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ (Hailstorm) ಹಾಗೂ ಭಾರಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?

ರಾಜಧಾನಿ ಬೆಂಗಳೂರಿನಲ್ಲಿ (ನಗರ ಮತ್ತು ಗ್ರಾಮಾಂತರ) ಏಪ್ರಿಲ್ 29 ರಿಂದ ಮೇ 2 ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಏಪ್ರಿಲ್ 30 ರಂದು ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಸಂಜೆ ಅಥವಾ ರಾತ್ರಿ ವೇಳೆಗೆ ನಗರದ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಲಿದೆ.

ಮೇ 1 ರಿಂದ ಮೇ 5 ರವರೆಗೆ ಮಳೆ ಮುಂದುವರಿಕೆ:

ಮೇ ತಿಂಗಳ ಆರಂಭದಲ್ಲೂ ರಾಜ್ಯದ ದಕ್ಷಿಣ ಭಾಗಗಳಲ್ಲಿ ಮಳೆ ಮುಂದುವರಿಯಲಿದೆ.

ಮೇ 1 ಮತ್ತು 2: ಉತ್ತರ ಕರ್ನಾಟಕದಲ್ಲಿ ಮಳೆ ಕ್ಷೀಣಿಸಲಿದ್ದರೂ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಮಳೆ ಮುಂದುವರಿಯಲಿದೆ.

ಮೇ 3 ರಿಂದ 5: ಕರಾವಳಿ ಮತ್ತು ಉತ್ತರ ಒಳನಾಡು ಬಹುತೇಕ ಒಣ ಹವೆಯಿಂದ ಕೂಡಿರಲಿದೆ. ಆದರೆ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಲಘುವಾದ ಮಳೆ ಮುಂದುವರಿಯುವ ಲಕ್ಷಣಗಳಿವೆ.

ರೈತರಿಗೆ ಮತ್ತು ಸಾರ್ವಜನಿಕರಿಗೆ ಸೂಚನೆ:

ಮಳೆಯ ಜೊತೆಗೆ ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿರುವುದರಿಂದ ಹಳೆಯ ಕಟ್ಟಡಗಳ ಕೆಳಗೆ ಅಥವಾ ಮರಗಳ ಕೆಳಗೆ ಆಶ್ರಯ ಪಡೆಯದಂತೆ ಸೂಚಿಸಲಾಗಿದೆ. ಆಲಿಕಲ್ಲು ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದ್ದು, ರೈತರು ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ. ಗುಡುಗು ಮಿಂಚಿನ ಸಂದರ್ಭದಲ್ಲಿ ವಿದ್ಯುತ್ ಕಂಬಗಳಿಂದ ದೂರವಿರಲು ಹವಾಮಾನ ಇಲಾಖೆ ಸಲಹೆ ನೀಡಿದೆ.

 

By News Desk - 03-05-2026


Ads in Post