Search


ಕೊಳಕು ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 5ನೇ ಸ್ಥಾನ; ರಾಜಧಾನಿಗೆ ಮತ್ತೊಂದು ಕಳಂಕ

ಬೆಂಗಳೂರು : ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿ ಹಬ್ ಎಂದೆಲ್ಲಾ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿರುವ ನಮ್ಮ ಹೆಮ್ಮೆಯ ಬೆಂಗಳೂರು ನಗರದ ಪಾಲಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಪ್ರತಿ ವರ್ಷದಂತೆ ಈ ಬಾರಿ ಬಿಡುಗಡೆಯಾಗಿರುವ 'ಸ್ವಚ್ಛ ಸರ್ವೇಕ್ಷಣಾ 2025' ವರದಿಯಲ್ಲಿ ಸಿಲಿಕಾನ್ ಸಿಟಿಯ ಮರ್ಯಾದೆ ಹರಾಜಾಗಿದ್ದು. ದೇಶದ ಅತಿ ಕೊಳಕು ಅಥವಾ ಸ್ವಚ್ಛತೆಯ ಕೊರತೆ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 5ನೇ ಸ್ಥಾನ ಲಭಿಸಿದೆ.

ಈಗಾಗಲೇ ರಸ್ತೆಗುಂಡಿಯಿಂದ ವಿಶ್ವದೆಲ್ಲಡೆ ಸುದ್ದಿಯಾಗಿರುವ ಬೆಂಗಳೂರಿಗೆ ಮತ್ತೊಂದು ಕಪ್ಪುಚುಕ್ಕೆ ಅಂಟಿಕೊಂಡಿದೆ,  ಕಸದ ಸಮಸ್ಯೆ, ತ್ಯಾಜ್ಯ ವಿಲೇವಾರಿಯಲ್ಲಿನ ವೈಫಲ್ಯ, ಹಾಗೂ ಹದಗೆಟ್ಟಿರುವ ನೈರ್ಮಲ್ಯ ವ್ಯವಸ್ಥೆಗಳು ಬೆಂಗಳೂರನ್ನು ದೇಶದ ಟಾಪ್ 5 ಕೊಳಕು ನಗರಗಳ ಪಟ್ಟಿಗೆ ಸೇರಿಸಿವೆ. ಈ ವರದಿಯು ಗ್ರೇಟರ್‌ ಬೆಂಗಳೂರು ಅಥಾರಿಟಿ (ಜಿಬಿಎ) ಹಾಗೂ ಸರ್ಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಕಳವಳ ಮೂಡಿಸುವಂತೆ ಮಾಡಿದೆ.

ಟಾಪ್‌ 5 ಕೊಳಕು ನಗರಗಳು ಯಾವುವು...?

ಇನ್ನು ಸ್ವಚ್ಛ ಸರ್ವೇಕ್ಷಣಾ 2025ರ ವರದಿಯ ಅನ್ವಯ, ದೇಶದ ಅತ್ಯಂತ ಕೊಳಕು ನಗರಗಳ ಪಟ್ಟಿಯಲ್ಲಿ ತಮಿಳುನಾಡಿನ ಪ್ರಸಿದ್ಧ ದೇವಾಲಯಗಳ ನಗರಿ 'ಮಧುರೈ' ಮೊದಲ ಸ್ಥಾನದಲ್ಲಿದೆ. ಉಳಿದಂತೆ ಪಂಜಾಬ್‌ನ ಲುಧಿಯಾನ ಎರಡನೇ ಸ್ಥಾನ, ತಮಿಳುನಾಡಿನ ಚೆನ್ನೈ ಮೂರನೇ ಸ್ಥಾನ, ಜಾರ್ಖಂಡ್‌ನ ರಾಂಚಿ ನಾಲ್ಕನೇ ಸ್ಥಾನ ಹಾಗೂ ಬೆಂಗಳೂರು ಐದನೇ ಸ್ಥಾನದಲ್ಲಿದೆ. 

ಬೆಂಗಳೂರಿನ ದುಸ್ಥಿತಿಗೆ ಕಾರಣವೇನು..?

ಬೆಂಗಳೂರಿನ ಪ್ರಾಮುಖ್ಯತೆ ಬಗ್ಗೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಒಮ್ಮೆ ಮಾತನಾಡುವಾಗ " ಇಂದು ವಿಶ್ವ ಭಾರತವನ್ನ ಬೆಂಗಳೂರಿನ ಮೂಲಕ ನೋಡುತ್ತದೆ" ಎಂದು ಹೇಳಿದ್ದರು. ಆದರೆ ಇಂದು ಬೆಂಗಳೂರಿನ ಸಮಸ್ಯೆ ಬಗ್ಗೆ ವಿಶ್ವ ನೋಡುವಂತಾಗಿದೆ. ಹದಗೆಟ್ಟ ರಸ್ತೆಗಳು, ಟ್ರಾಫಿಕ್‌, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ಬೆಂಗಳೂರನ್ನ ಭಾಧಿಸುತ್ತಿವೆ. ಇವುಗಳ ಜೊತೆಗೆ ಅತಿದೊಡ್ಡ ಸಮಸ್ಯೆಯೆಂದರೆ ಅದು ತ್ಯಾಜ್ಯ ನಿರ್ವಹಣೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದ್ದು, ಪ್ರತಿದಿನ ಸಾವಿರಾರು ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ, ಆದರೆ ಇದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಹಿಂದಿನ ಬಿಬಿಎಂಪಿ ಹಾಗೂ ಇಂದಿನ ಜಿಬಿಯೆ ಸಂಪೂರ್ಣ ವಿಫಲವಾಗಿದೆ. ರಸ್ತೆ ಬದಿಗಳಲ್ಲಿ ಕಸದ ರಾಶಿ, ಒಳಚರಂಡಿ ಸಮಸ್ಯೆಗಳು, ಕೆರೆಗಳ ಮಾಲಿನ್ಯ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯ ಕೊರತೆಯಿಂದಾಗಿ ನಗರದ ಸ್ವಚ್ಛತೆ ಸಂಪೂರ್ಣ ಹದಗೆಟ್ಟಿದೆ. ಇನ್ನು ಮುಂದಾದರು ಸರ್ಕಾರ ಈ ಕುರಿತು ಹೆಚ್ಚಿನ ಗಮನ ಹರಿಸಿ, ಬೆಂಗಳೂರಿನ ಗತ ವೈಭವವನ್ನ ಮರಳಿ ತರುತ್ತದ ಎಂಬುದನ್ನ ಕಾದು ನೋಡಬೇಕಿದೆ.

By thebigbulletin.com - 25-05-2026


Ads in Post