Search


ಮೋದಿ ಅವರಿಗೆ ಭಾರತ ರತ್ನ; ಸುದ್ದಿಗೊಷ್ಟಿಯಲ್ಲಿ ಜೆ. ಪಿ ನಡ್ದಾ ಶಾಕಿಂಗ್ ಹೇಳಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಪ್ರಶಸ್ತಿ ನೀಡುವ ಕುರಿತು ಬಿಜೆಪಿಯಲ್ಲಿ ಇದುವರೆಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಡ್ಡಾ, ಭಾರತ ರತ್ನದಂತಹ ವಿಚಾರಗಳ ಕುರಿತು ಪಕ್ಷವು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು. ‘ಈ ವಿಷಯದ ಬಗ್ಗೆ ಇಲ್ಲಿಯವರೆಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೆ ನಿಮ್ಮ ಸಲಹೆ ಉತ್ತಮವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಧಾನಿ ಮೋದಿ ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ ಎಂದು ನಡ್ಡಾ ತಿಳಿಸಿದರು. ಮೋದಿ ಅವರ ಜನ್ಮದಿನವನ್ನು ಬಿಜೆಪಿ ‘ಸೇವಾ ಸಪ್ತಾಹ’ವಾಗಿ ಆಚರಿಸಲಿದ್ದು, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.

ಅಭಿಯಾನವು ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿದ್ದು, ಜಿಲ್ಲೆ, ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ ಹಾಗೂ ಬೂತ್ ಮಟ್ಟದಲ್ಲಿ ಜನರನ್ನು ತಲುಪುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಾರ್ವಜನಿಕ ಸೇವೆಗೆ ತಮ್ಮ ರಾಜಕೀಯ ಜೀವನವನ್ನು ಸಮರ್ಪಿಸಿಕೊಂಡಿರುವ ನಾಯಕನಾಗಿ ಮೋದಿ ಅವರನ್ನು ನಡ್ಡಾ ಬಣ್ಣಿಸಿದರು.

ಇದೇ ವೇಳೆ, ಪ್ರಧಾನಿ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ನಡ್ಡಾ ತಳ್ಳಿಹಾಕಿದರು. ‘ಮೋದಿ ಜಗತ್ತು ಕಂಡ ಅತ್ಯಂತ ಪ್ರಜಾಸತ್ತಾತ್ಮಕ ನಾಯಕ’ ಎಂದು ಅವರು ಹೇಳಿದರು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ದೇಶದ ಪರಿವರ್ತನೆ ಮತ್ತು ಅಭಿವೃದ್ಧಿಯತ್ತ ಸಾಗಲು ಸಾಧ್ಯವಿಲ್ಲ ಎಂದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯತ್ತ ದೇಶ ಮುನ್ನಡೆಯುತ್ತಿದೆ ಎಂದು ನಡ್ಡಾ ಹೇಳಿದರು. ಬಡವರ ಕಲ್ಯಾಣ, ಆರ್ಥಿಕತೆ, ರಾಷ್ಟ್ರೀಯ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ವಿವರಿಸಿದರು.

By Ravikumar - 16-09-2026


Ads in Post