ಬೆಂಗಳೂರು: ಬಿಡದಿ ಟೌನ್ಸಿಫ್ ವಿರೋಧಿಸಿ ರೈತರು ಪ್ರತಿನಿತ್ಯ ಪ್ರತಿಭಟನೆ ನಡೆಸುತ್ತಿರುವ ನಡುವೆ ರಾಜ್ಯ ಉಚ್ಚ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಬಿಡದಿ ಟೌನ್ಶಿಫ್ಗೆ ಎಂದು ವಶಪಡಿಸಿಕೊಳ್ಳುತ್ತಿರುವ ಯೋಜನಾ ಪ್ರದೇಶದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಒಂದು ಇಟ್ಟಿಗೆಯನ್ನು ಅಲುಗಾಡಿಸುವಂತಿಲ್ಲ, ಒಂದೇ ಒಂದು ಮರವನ್ನು ಕಡಿಯುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬಿಡದಿ ಟೌನ್ಶಿಫ್ ವಿರೋಧಿಸಿ ಸಲ್ಲಿಸಿರುವ ರಿಜ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಆರ್.ನಟರಾಜ್ ಅವರ ಏಕಸದಸ್ಯ ಪೀಠ, ʻಸರ್ಕಾರ ಪರಿಹಾರ ಮೊತ್ತವನ್ನು ನಿಗದಿಪಡಿಸಿದ ತಕ್ಷಣವೇ ಬುಲ್ಡೋಜರ್ ತೆಗೆದುಕೊಂಡು ಹೋದರೆ ಹೇಗೆ? ರಾತ್ರೋರಾತ್ರಿ ಆಸ್ತಿ ನಾಶಪಡಿಸುವ ಕೆಲಸಕ್ಕೆ ಸರ್ಕಾರ ಕೈಹಾಕಬಾರದು ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಅಷ್ಟೇ ಅಲ್ಲದೇ ಪರಿಹಾರ ಮೊತ್ತ ಪ್ರಕಟವಾದರೂ ಕೂಡ ಹೈಕೋರ್ಟ್ ಅನುಮತಿ ಪಡೆಯದೆ ಕೃಷಿಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಸೂಚನೆ ನೀಡಿತು.
ಭೂಮಿ ಕೊಡ್ತೀನಿ ಅಂದವರ ಬಗ್ಗೆ ದಾಖಲೆ ಕೊಟ್ಟಿಲ್ಲ..!
ಟೌನ್ಶಿಪ್ ಯೋಜನೆಗೆ ಬಿಡದಿ ರೈತರು ವಿರೋಧಿಸುತ್ತಿಲ್ಲ, ಬಹುತೇಕ ರೈತರು ತಾವೇ ಮುಂದೆ ಬಂದು ಭೂಮಿ ಕೊಡ್ತಿದ್ದಾರೆ ಎಂದು ಹಲವು ಜನಪ್ರತಿನಿಧಿಗಳು ಹೇಳಿಕೆ ನೀಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ʻ ಸರ್ಕಾರ ಬಹಳಷ್ಟು ರೈತರು ಸ್ವಯಂ ಪ್ರೇರಿತರಾಗಿ ಭೂಮಿ ಕೊಡ್ತಿದ್ದಾರೆ ಎಂದು ಹೇಳಿದೆ, ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿಲ್ಲ ಎಂದು ಹೇಳಿದರು, ಈ ವೇಳೆ ಮಾತನಾಡಿದ ರೈತರ ಪರ ವಕೀಲರು ʻವಾಸ್ತವದಲ್ಲಿ ಶೇ 5ರಷ್ಟು ರೈತರು ಕೂಡ ಭೂಮಿ ನೀಡಲು ಒಪ್ಪಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಪರಿಹಾರ ಮೊತ್ತವನ್ನು ಅಂತಿಮವಾಗಿ ನಿಗದಿಪಡಿಸುವವರೆಗೆ ಯಾವುದೇ ರೈತರನ್ನು ತೆರವುಗೊಳಿಸುವುದಿಲ್ಲ. ಪರಿಹಾರದ ವಿವರಗಳನ್ನು ಮೊದಲು ಹೈಕೋರ್ಟ್ ಪೀಠದ ಮುಂದಿಡಲಾಗುವುದು. ನ್ಯಾಯಾಲಯದ ಗಮನಕ್ಕೆ ತಂದ ಬಳಿಕವೇ ಮುಂದಿನ ಪ್ರಕ್ರಿಯೆ ಮುಂದುವರಿಯಲಿದೆ. ಹೀಗಿರುವಾಗ ಏಕಾಏಕಿ ಮುಂದುವರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಭರವಸೆ ನೀಡಿದರು.
ಸರ್ಕಾರದ ಪರ ಎಜಿ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ರಾತ್ರೋರಾತ್ರಿ ಪರಿಹಾರ ನಿಗದಿಪಡಿಸಿ ಮರ ಕಡಿಯುವ ಕೆಲಸ ನಡೆಯುವುದಿಲ್ಲವಾದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಬಳಿಕ ಮುಖ್ಯ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 29 ಕ್ಕೆ ಮುಂದೂಡಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹೊಸ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 1 ಕ್ಕೆ ನಿಗದಿಪಡಿಸಲಾಗಿದೆ.