Search


ಗಣಿಧಣಿಗೆ ಬಿಗ್‌ ರಿಲೀಫ್‌ ; 2 ಅಕ್ರಮ ಅದಿರು ಸಾಗಾಟ ಕೇಸ್‌ನಿಂದ ಕೈಬಿಟ್ಟ ಕೋರ್ಟ್‌

ಬೆಂಗಳೂರು: ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಶಾಸಕ ಜನಾರ್ಧನ್‌ ರೆಡ್ಡಿಗೆ ದೊಡ್ಡ ರಿಲೀಫ್‌ ಸಿಕ್ಕಿದ್ದು. ಲೋಕಾಯುಕ್ತ ದಾಖಲಿಸಿದ್ದ 2 ಪ್ರಕರಣಗಳಿಂದ ರೆಡ್ಡಿ ಸೇರಿದಂತೆ ಹಲವರನ್ನ ಜನಪ್ರತಿನಿಧಿಗಳ ನ್ಯಾಯಾಲಯ ಕೈಬಿಟ್ಟಿದೆ.

ಲೋಕಾಯುಕ್ತ ವಿಶೇಷ ತನಿಖಾ ದಳ ದಾಖಲಿಸಿದ್ದ ಎರಡು ಪ್ರಮುಖ ಕೇಸ್‌ಗಳಲ್ಲಿ ಜನಾರ್ದನ ರೆಡ್ಡಿಗೆ ರಿಲೀಫ್ ಸಿಕ್ಕಿದೆ. ಪ್ರಕರಣದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಜನಾರ್ದನ ರೆಡ್ಡಿ ಸೇರಿದಂತೆ ಇತರ ಆರೋಪಿಗಳನ್ನು ಪ್ರಕರಣದಿಂದ ಕೈಬಿಟ್ಟು ಮಹತ್ವದ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಬೆನ್ನ ಹಿಂದೆ ಚೂರಿ ಹಾಕಿದ ಆಪ್ತರಿಗೆ ಶಾಕ್‌ ಕೊಡ್ತಾರಾ ಸಿದ್ದರಾಮಯ್ಯ..!

ಜನಾರ್ದನ ರೆಡ್ಡಿಯೊಂದಿಗೆ ಮೆಹಫೂಜ್ ಅಲಿ ಖಾನ್, ಉದ್ಯಮಿಗಳಾದ ಹೊತ್ತೂರ್ ಅಬ್ದುಲ್ ವಹಾಬ್, ಹೊತ್ತೂರ್ ನೂರ್ ಅಹಮದ್, ಹೊತ್ತೂರ್ ಮೊಹಮ್ಮದ್ ಇಕ್ಬಾಲ್ ಹಾಗೂ ಟ್ರೈಡೆಂಟ್ ಮೈನಿಂಗ್ ಕಂಪನಿ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನೂ ಸಹ ಜನಪ್ರತಿನಿಧಿಗಳ ನ್ಯಾಯಾಲಯ ವಜಾಗೊಳಿಸಿದೆ.

ಪ್ರಕರಣದ ಹಿನ್ನಲೆ..!

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಯಾವುದೇ ರೀತಿಯ ಮುನ್ಸೂಚನೆ ಅಥವಾ ಅಗತ್ಯ ಅನುಮತಿಗಳನ್ನು ಪಡೆಯದೇ, ಸರ್ಕಾರಕ್ಕೆ ಪಾವತಿಸಬೇಕಿದ್ದ ರಾಜಧನ (ರಾಯಲ್ಟಿ) ಹಾಗೂ ಇತರೆ ಶಾಸನಬದ್ಧ ಶುಲ್ಕಗಳಿಗೆ ವಂಚಿಸಿ ಆರೋಪಿಗಳು ಭಾರಿ ಪ್ರಮಾಣದ ಅಕ್ರಮ ಎಸಗಿರುವುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಆರೋಪಿಗಳು ಒಟ್ಟು 1,25,419 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಕಾನೂನುಬಾಹಿರವಾಗಿ ‘ಎನ್ ಶೇಕ್‌ಸಾಬ್ ಮೈನ್ಸ್’ ಮತ್ತು ‘ತಿರುಮಲ ಕನ್ವೇಯರ್ ಸಿಸ್ಟಮ್ಸ್’ ಕಂಪನಿಗಳಿಗೆ ಮಾರಾಟ ಮಾಡಲಾಗಿತ್ತು. ಇದರ ಆಧಾರದ ಮೇಲೆ ಲೋಕಾಯುಕ್ತದ ವಿಶೇಷ ತನಿಖಾ ದಳ ಇವರ ಮೇಲೆ ಪ್ರಕರಣ ದಾಖಲಿಸಿತ್ತು.

ಆದರೆ ಆರೋಪಿಗಳು ನಮ್ಮ ವಿರುದ್ದ ಪಿತೂರಿ ನಡೆಸಿದ್ದಾರೆ ಎಂದು ಸಿಆರ್‌ಪಿಸಿ ಸೆಕ್ಷನ್‌ 227ರ ಅಡಿಯಲ್ಲಿ ಪ್ರಕರಣದಿಂದ ಕೈಬಿಡುವಂತೆ ಆರೋಪಿಗಳ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯವು ಇದೀಗ ಇವರೆಲ್ಲರಿಗೂ ಕ್ಲೀನ್ ಚೀಟ್ ನೀಡಿದೆ.

By Ravikumar - 30-05-2026


Ads in Post