Search


ಹಬ್ಬಕ್ಕೂ ಮುನ್ನ ಕೇಂದ್ರದಿಂದ ಬಿಗ್‌ ರಿಲೀಫ್‌: ಅಡುಗೆ ಎಣ್ಣೆ ಮೇಲಿನ ಸುಂಕ ಇಳಿಕೆ

ಬೆಂಗಳೂರು: ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವ ಹೊತ್ತಿನಲ್ಲೇ ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಪ್ರಮುಖ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

ತಾಳೆ ಎಣ್ಣೆ, ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಸೇರಿದಂತೆ ಪ್ರಮುಖ ಅಡುಗೆ ಎಣ್ಣೆಗಳ ಆಮದು ಸುಂಕದಲ್ಲಿ ಕಡಿತ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ ಕೆಲವು ಅಡುಗೆ ಎಣ್ಣೆಗಳ ಬೆಲೆ ಸುಮಾರು ಶೇ.20ರಷ್ಟು ಏರಿಕೆಯಾಗಿತ್ತು. ಇದೀಗ ಸುಂಕ ಕಡಿತವಾಗಿರುವುದರಿಂದ ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಬೆಲೆ ಇಳಿಕೆಯ ಪ್ರಯೋಜನ ಸಿಗುವ ನಿರೀಕ್ಷೆಯಿದೆ.

ಯಾವ ಎಣ್ಣೆಗೆ ಎಷ್ಟು ಸುಂಕ ಕಡಿತ?

ಪಾಮ್‌ ಎಣ್ಣೆ ಸೇರಿದಂತೆ ಕೆಲವು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.5ಕ್ಕೆ ಇಳಿಸಲಾಗಿದೆ. ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಇದರಿಂದ ಆಮದುದಾರರು ಹಾಗೂ ಎಣ್ಣೆ ತಯಾರಕರಿಗೆ ವೆಚ್ಚ ಕಡಿಮೆಯಾಗುವ ಸಾಧ್ಯತೆ ಇದೆ. ಭಾರತದ ಒಟ್ಟು ಅಡುಗೆ ಎಣ್ಣೆ ಅಗತ್ಯದ ಸುಮಾರು ಮೂರನೇ ಎರಡರಷ್ಟು ಭಾಗ ಆಮದಿನ ಮೂಲಕ ಪೂರೈಕೆಯಾಗುತ್ತದೆ. ಮಲೇಷ್ಯಾ, ಇಂಡೋನೇಷ್ಯಾ, ಅರ್ಜೆಂಟೀನಾ, ರಷ್ಯಾ ಮತ್ತು ಉಕ್ರೇನ್ ಸೇರಿದಂತೆ ಹಲವು ದೇಶಗಳಿಂದ ಭಾರತಕ್ಕೆ ಪಾಮ್‌, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಆಮದಾಗುತ್ತದೆ.

ಸುಂಕ ಕಡಿತದಿಂದ ಸೂರ್ಯಕಾಂತಿ ಎಣ್ಣೆ ಆಮದು ಹೆಚ್ಚು ಆಕರ್ಷಕವಾಗುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಲಭ್ಯತೆ ಹೆಚ್ಚಾಗಬಹುದು. ಜೊತೆಗೆ ಪಾಮ್‌ ಮತ್ತು ಸೋಯಾ ಎಣ್ಣೆಗೆ ಹೋಲಿಸಿದರೆ ಸೂರ್ಯಕಾಂತಿ ಎಣ್ಣೆಯ ಬಳಕೆ ಹೆಚ್ಚಾಗುವ ಸಾಧ್ಯತೆಯೂ ಇದೆ.

By Ravikumar - 24-09-2026


Ads in Post