ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚೋರೋ ಕೆ ಸರ್ದಾರ್’ ಹಾಗೂ ‘ಕಮಾಂಡರ್-ಇನ್-ಥೀಫ್’ ಎಂದು ಕರೆದಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಾಂಬೆ ಹೈಕೋರ್ಟ್ನಿಂದ ಹಿನ್ನಡೆಯಾಗಿದೆ. ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸಲು ಬಾಂಬೆ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ಮತ್ತು ಪ್ರಕರಣದ ಮುಂದಿನ ವಿಚಾರಣೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಈ ಹಂತದಲ್ಲಿ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದೆ.
ರಾಹುಲ್ ಗಾಂಧಿ ಪರ ವಕೀಲರು, ಅವರ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷದ ಹೆಸರನ್ನು ಉಲ್ಲೇಖಿಸಿಲ್ಲ ಎಂದು ವಾದಿಸಿದ್ದರು. ಯಾವುದೇ ಗುರುತಿಸಬಹುದಾದ ಅಥವಾ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿಕೊಂಡಿಲ್ಲ. ಹೀಗಾಗಿ, ನೇರವಾಗಿ ನೊಂದ ವ್ಯಕ್ತಿ ಅಥವಾ ನಿರ್ದಿಷ್ಟ ಗುಂಪು ಇಲ್ಲದಿರುವಾಗ ಕ್ರಿಮಿನಲ್ ಮಾನನಷ್ಟ ಪ್ರಕರಣವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ವಾದದ ಕುರಿತು ನ್ಯಾಯಾಲಯವು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿತು. ರಾಜಕೀಯ ಪಕ್ಷವೊಂದು ನೋಂದಾಯಿತ ಸಂಸ್ಥೆಯಾಗಿರುವ ಕಾರಣ ಅದನ್ನು ಗುರುತಿಸಬಹುದಾದ ಮತ್ತು ನಿರ್ದಿಷ್ಟ ಸಂಸ್ಥೆಯಾಗಿ ಪರಿಗಣಿಸಬಹುದು ಎಂಬ ಅಂಶವನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿದೆ. ದೂರುದಾರರು, ರಾಹುಲ್ ಗಾಂಧಿ ಮತ್ತು ಮಹಾರಾಷ್ಟ್ರ ಸರ್ಕಾರದ ವಾದಗಳನ್ನು ಆಲಿಸಿದ ಬಳಿಕ ಹೈಕೋರ್ಟ್ ಈ ವರ್ಷದ ಫೆಬ್ರವರಿಯಲ್ಲಿ ಆದೇಶವನ್ನು ಕಾಯ್ದಿರಿಸಿತ್ತು.
ಬಿಜೆಪಿ ಕಾರ್ಯಕರ್ತ ಮಹೇಶ್ ಶ್ರೀಶ್ರೀಮಲ್ ಅವರು ರಾಹುಲ್ ಗಾಂಧಿ ವಿರುದ್ಧ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪ್ರಧಾನಿ ಮೋದಿಯನ್ನು ‘ಚೋರೋ ಕೆ ಸರ್ದಾರ್’ ಎಂದು ಕರೆದಿರುವುದು ಬಿಜೆಪಿ ಸದಸ್ಯರೆಲ್ಲರನ್ನೂ ‘ಕಳ್ಳರು’ ಎಂದು ಬಿಂಬಿಸಿದಂತಾಗಿದೆ ಎಂದು ಅವರು ಆರೋಪಿಸಿದ್ದರು. ರಾಹುಲ್ ಗಾಂಧಿಯವರ ಹೇಳಿಕೆಗಳು ಮೋದಿ, ಬಿಜೆಪಿ ಮತ್ತು ಅದರ ಸದಸ್ಯರ ಖ್ಯಾತಿಗೆ ಧಕ್ಕೆಯುಂಟುಮಾಡಿವೆ ಎಂದು ದೂರಿನಲ್ಲಿ ವಾದಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದು, ಇದೀಗ ಅದನ್ನು ರದ್ದುಪಡಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.