ಮೀರತ್: ಉತ್ತರ ಪ್ರದೇಶದ ಮೀರುತ್ನಲ್ಲಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ಸ್ಥಳೀಯ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಕಳೆದ ವರ್ಷ ನಡೆದಿದ್ದ ಈ ಭೀಕರ ಕೊಲೆ ಪ್ರಕರಣದಲ್ಲಿ ಇಬ್ಬರೂ ತಪ್ಪಿತಸ್ಥರೆಂದು ಎರಡು ವಾರಗಳ ಹಿಂದೆ ನ್ಯಾಯಾಲಯ ತೀರ್ಪು ನೀಡಿತ್ತು. ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಜಿಲ್ಲಾ ನ್ಯಾಯಾಲಯ, ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಇಬ್ಬರಿಗೂ ಗರಿಷ್ಠ ಶಿಕ್ಷೆ ವಿಧಿಸಿದೆ.
ಪೊಲೀಸರ ಪ್ರಕಾರ, 2025ರ ಮಾರ್ಚ್ 3ರಂದು ಮೀರುತ್ನ ಇಂದ್ರಾ ನಗರದಲ್ಲಿರುವ ಮನೆಯಲ್ಲಿ ಮುಸ್ಕಾನ್ ತನ್ನ ಪತಿ ಸೌರಭ್ಗೆ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಳು ಎನ್ನಲಾಗಿದೆ. ಬಳಿಕ ಅಲ್ಲಿಗೆ ಬಂದ ಸಾಹಿಲ್ ಶುಕ್ಲಾ ಜೊತೆ ಸೇರಿ ಸೌರಭ್ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ನಂತರ ಬಾತ್ರೂಮ್ನಲ್ಲಿ ಮೃತದೇಹವನ್ನು ತುಂಡರಿಸಿ, ದೇಹದ ಭಾಗಗಳನ್ನು ದೊಡ್ಡ ನೀಲಿ ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿ, ಅದರೊಳಗೆ ಮರಳು, ನೀರು ಮತ್ತು ಸಿಮೆಂಟ್ ಮಿಶ್ರಣ ಹಾಕಿ ಮುಚ್ಚಿಟ್ಟಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಕೊಲೆಯ ಮರುದಿನವೇ ಮುಸ್ಕಾನ್ ಮತ್ತು ಸಾಹಿಲ್ ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಈ ನಡುವೆ ಸೌರಭ್ ಅವರ ಮೊಬೈಲ್ ಫೋನ್ ಬಳಸಿ ಕುಟುಂಬದವರಿಗೆ ಸಂದೇಶಗಳನ್ನು ಕಳುಹಿಸಿದ್ದ ಮುಸ್ಕಾನ್, ಪತಿ ಬದುಕಿದ್ದಾರೆ ಮತ್ತು ವ್ಯವಹಾರದ ನಿಮಿತ್ತ ಪ್ರಯಾಣದಲ್ಲಿದ್ದಾರೆ ಎಂಬ ನಂಬಿಕೆ ಮೂಡಿಸಲು ಯತ್ನಿಸಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. 2025ರ ಮಾರ್ಚ್ 17ರಂದು ಸೌರಭ್ ಅವರ ಸಂಬಂಧಿಕರಿಗೆ ಅನುಮಾನ ಉಂಟಾಗಿ ಮನೆಗೆ ಭೇಟಿ ನೀಡಿದಾಗ, ದಂಪತಿಯ ಆರು ವರ್ಷದ ಮಗಳು ನೆರೆಹೊರೆಯವರಿಗೆ “ಪಪ್ಪಾ ಡ್ರಮ್ನಲ್ಲಿದ್ದಾರೆ” ಎಂದು ಹೇಳಿದ್ದಳು ಎನ್ನಲಾಗಿದೆ. ಬಳಿಕ ಪೊಲೀಸರು ಡ್ರಮ್ ತೆರೆದಾಗ ಸೌರಭ್ ಅವರ ದೇಹದ ಅವಶೇಷಗಳು ಪತ್ತೆಯಾಗಿದ್ದವು. ನಂತರ ಆರೋಪಿಗಳನ್ನು ಬಂಧಿಸಲಾಯಿತು.
ಪ್ರಕರಣದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಹಲವು ಪ್ರಮುಖ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿತ್ತು. ಕೊಲೆಗೆ ಮುನ್ನ ಆರೋಪಿಗಳು ನೀಲಿ ಪ್ಲಾಸ್ಟಿಕ್ ಡ್ರಮ್, ಸಿಮೆಂಟ್ ಚೀಲಗಳು, ಮರಳು, ಮಾಂಸ ಕತ್ತರಿಸುವ ಸಾಧನಗಳು ಮತ್ತು ರೇಜರ್ಗಳನ್ನು ಖರೀದಿಸಿದ್ದರು ಎಂಬುದಕ್ಕೆ ಅಂಗಡಿಕಾರರ ಹೇಳಿಕೆಗಳು ಸಾಕ್ಷ್ಯವಾಗಿದ್ದವು. ಅಲ್ಲದೆ, ಕರೆಗಳ ವಿವರಗಳು, ಮೊಬೈಲ್ ಟವರ್ಗಳ ಸ್ಥಳದ ಮಾಹಿತಿ ಹಾಗೂ ಆರೋಪಿಗಳು ಶಿಮ್ಲಾ ಮತ್ತು ಮನಾಲಿಯ ಹೋಟೆಲ್ಗಳಲ್ಲಿ ಒಟ್ಟಿಗೆ ತಂಗಿದ್ದ ದಾಖಲೆಗಳನ್ನು ಸಲ್ಲಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯೂ ಸೌರಭ್ ಚೂರಿ ಇರಿತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿತ್ತು.
ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು ಒಟ್ಟು 126 ವಿಚಾರಣೆಗಳು ಮತ್ತು 22 ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಿದ ಬಳಿಕ ಮುಸ್ಕಾನ್ ಹಾಗೂ ಸಾಹಿಲ್ ಸೌರಭ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತೀರ್ಮಾನಿಸಿದರು. ಇಂತಹ ಭೀಕರ ಅಪರಾಧಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತವೆ ಎಂಬ ಅಭಿಪ್ರಾಯವನ್ನು ನ್ಯಾಯಾಧೀಶರು ವ್ಯಕ್ತಪಡಿಸಿದ್ದರು. ಇದೀಗ ಇಬ್ಬರು ಆರೋಪಿಗಳಿಗೆ ಮರಣದಂಡನೆ ವಿಧಿಸುವ ಮೂಲಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.