Search


ಖಮೇನಿ ಅಂತ್ಯಕ್ರಿಯೆಯಲ್ಲಿ ಬಿಹಾರದ ರಾಜ್ಯಪಾಲೆ ಸೈಯದ್ ಅಟಾ ಹಸ್ನೈನ್ ಭಾಗಿ..!

ನವದೆಹಲಿ: ಇರಾನ್‌ನ ಅತ್ಯುನ್ನತ ನಾಯಕ ಅಯತೊಲ್ಲಾ ಅಲಿ ಖಮೇನಿ (Khamenei’s funeral) ಅವರ ನಿಧನದ ಹಿನ್ನೆಲೆಯಲ್ಲಿ, ಅವರ ಅಂತ್ಯಕ್ರಿಯೆಯಲ್ಲಿ ಭಾರತ ಸರ್ಕಾರದ ಪರವಾಗಿ ಅಧಿಕೃತವಾಗಿ ಬಿಹಾರದ ರಾಜ್ಯಪಾಲರಾದ ಸೈಯದ್ ಅಟಾ ಹಸ್ನೈನ್ ಮತ್ತು ಕೇಂದ್ರ ವಿದೇಶಾಂಗ ಹಾಗೂ ಜವಳಿ ಖಾತೆಯ ರಾಜ್ಯ ಸಚಿವರಾದ ಪವಿತ್ರ ಮಾರ್ಗರಿಟಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 

ಇರಾನ್ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಕೂಡ ಆಹ್ವಾನಿಸಲಾಗಿತ್ತು. ಆದರೆ, ಅವರ ಪರವಾಗಿ ಬಿಹಾರದ ರಾಜ್ಯಪಾಲರು ಮತ್ತು ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವರ ನಿಯೋಗ ಇರಾನ್​ಗೆ ತೆರಳುತ್ತಿದೆ. ಇರಾನ್‌ನೊಂದಿಗೆ ಭಾರತ ಹೊಂದಿರುವ ಐತಿಹಾಸಿಕ ಮತ್ತು ರಾಜತಾಂತ್ರಿಕ ಬಾಂಧವ್ಯದ ದೃಷ್ಟಿಯಿಂದ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ.

ಬಿಹಾರದ ರಾಜ್ಯಪಾಲ ಸೈಯದ್ ಅಟಾ ಹಸ್ನೈನ್ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಆಗಿದ್ದವರು. ಇಸ್ಲಾಮಿಕ್ ಜಗತ್ತು ಮತ್ತು ಮಧ್ಯಪ್ರಾಚ್ಯ ವ್ಯವಹಾರಗಳಲ್ಲಿ ಅಪಾರ ಜ್ಞಾನ ಹಾಗೂ ತಾಂತ್ರಿಕ ಅನುಭವ ಹೊಂದಿರುವ ಇವರ ನೇತೃತ್ವದ ನಿಯೋಗವು ಭಾರತದ ಪರವಾಗಿ ಖಮೇನಿಯವರಿಗೆ ಸಂತಾಪ ಸೂಚಿಸಲಿದೆ.

ಇನ್ನು ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಷ್ಯಾ, ಚೀನಾ, ಟರ್ಕಿ ಹಾಗೂ ಅರಬ್ ರಾಷ್ಟ್ರಗಳು ಸೇರಿದಂತೆ ವಿಶ್ವದ ವಿವಿಧ ದೇಶಗಳ ಪ್ರಮುಖ ನಾಯಕರು ಮತ್ತು ರಾಜತಾಂತ್ರಿಕ ಪ್ರತಿನಿಧಿಗಳು ಇರಾನ್ ರಾಜಧಾನಿ ಟೆಹ್ರಾನ್‌ಗೆ ಆಗಮಿಸುತ್ತಿದ್ದಾರೆ. ಇರಾನ್‌ನ ಇಸ್ಲಾಮಿಕ್ ಗಣರಾಜ್ಯದಲ್ಲಿ ಸುದೀರ್ಘ ಕಾಲ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ ಖಮೇನಿ ಅವರ ಸಾವು ಜಾಗತಿಕ ರಾಜಕಾರಣದಲ್ಲೂ ಭಾರಿ ಸಂಚಲನ ಮೂಡಿಸಿತ್ತು.

By Ravikumar - 29-06-2026


Ads in Post