ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಬೃಹತ್ ಪಾದಯಾತ್ರೆ ಘೋಷಿಸಿದೆ, ಅಧಿವೇಶನದ ಉದ್ದಕ್ಕೂ ನಾಗೇಂದ್ರ ರಾಜೀನಾಮೆಗಾಗಿ ಆಗ್ರಹಿಸಿ ಹೋರಾಟ ಮಾಡಿದ್ದ ಬಿಜೆಪಿ, ಅಧಿವೇಶನಕ್ಕೆ ತೆರೆ ಎಳೆಯುತ್ತಿದ್ದಂತೆ ಬಳ್ಳಾರಿ ಚಲೋ ಘೋಷಣೆ ಮಾಡಿದೆ, ಸೆಪ್ಟೆಂಬರ್ 1ರಿಂದ 10 ದಿನಗಳ ಕಾಲ ಈ ಪಾದಯಾತ್ರೆ ನಡೆಯಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಈ ಕುರಿತು ಘೋಷಣೆ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಜಿ. ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಸಿ. ಟಿ. ರವಿ ಹಾಗೂ ರಾಜುಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ನಿರ್ಧಾರ ಪ್ರಕಟಿಸಲಾಯಿತು.
ಸೆಪ್ಟೆಂಬರ್ 1 ರಿಂದ 10 ರವರೆಗೆ ಒಟ್ಟು 10 ದಿನಗಳ ಕಾಲ ರಾಯಚೂರಿನಿಂದ ಬಳ್ಳಾರಿಯವರೆಗೆ ಸುಮಾರು 170 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಲಿಂಗಸುಗೂರು ಕ್ಷೇತ್ರದ ಗುರಗುಂಟದಿಂದ ಆರಂಭವಾಗುವ ಯಾತ್ರೆಯು ಲಿಂಗಸುಗೂರು (21 ಕಿ.ಮೀ), ಮಸ್ಕಿ (30 ಕಿ.ಮೀ), ಸಿಂಧನೂರು (30 ಕಿ.ಮೀ), ಶಿರಗುಪ್ಪ (31 ಕಿ.ಮೀ), ತೆಕ್ಕಲಕೋಟೆ (11 ಕಿ.ಮೀ), ಸಿಂದಗೇರಿ (20 ಕಿ.ಮೀ) ಮಾರ್ಗವಾಗಿ ಬಳ್ಳಾರಿಯನ್ನು (27 ಕಿ.ಮೀ) ತಲುಪಲಿದೆ. ಈ ಪಾದಯಾತ್ರೆಗೆ ಮೈತ್ರಿಪಕ್ಷವಾದ ಜೆಡಿಎಸ್ ಕೂಡ ಬೆಂಬಲ ಸೂಚಿಸಿದ್ದು, ಉದ್ಘಾಟನೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ಕುರಿತು ಮಾತನಾಡಿರುವ ವಿಜಯೇಂದ್ರ ʻವಾಲ್ಮೀಕಿ ನಿಗಮದ ಅಕ್ರಮವನ್ನು ಸಿದ್ದರಾಮಯ್ಯ ಹಾಗೂ ಸಚಿವ ಶಿವಲಿಂಗೇಗೌಡ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಇಷ್ಟಾದರೂ ಮುಖ್ಯ ಆರೋಪಿಯಾಗಿರುವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯದೇ ಸರ್ಕಾರ ರಕ್ಷಣೆ ಮಾಡುತ್ತಿದೆ. ಅಧಿವೇಶನದಲ್ಲಿ ಸತ್ಯ ಎದುರಿಸಲಾಗದೆ ಸರ್ಕಾರ ಕಲಾಪವನ್ನು ಮೊಟಕುಗೊಳಿಸಿ ಪಲಾಯನ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.