ನವದೆಹಲಿ: ‘80s’ ಎಐ ಟ್ರೆಂಡ್ ಇದೀಗ ರಾಜಕೀಯ ವಾಗ್ವಾದಕ್ಕೂ ವೇದಿಕೆಯಾಗಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೆಯಾದ ಎಐ ಚಿತ್ರಗಳು ವಿವಾದಕ್ಕೆ ಕಾರಣವಾಗಿವೆ.
ಬಿಜೆಪಿ ಹಂಚಿಕೊಂಡಿರುವ ಕೆಲವು ಎಐ ರಚಿತ ಚಿತ್ರಗಳಲ್ಲಿ ಸೋನಿಯಾ ಗಾಂಧಿ ಅವರನ್ನು ಅವಹೇಳನಕಾರಿ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ರಾಜಕೀಯ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹಲವರು ಎಕ್ಸ್ನಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ, ಕೇರಳ ಹಾಗೂ ಗುಜರಾತ್ ಸೇರಿದಂತೆ ಬಿಜೆಪಿ ಹಲವು ಅಧಿಕೃತ ಎಕ್ಸ್ ಖಾತೆಗಳಲ್ಲಿ ಈ ಚಿತ್ರಗಳು ಹಂಚಿಕೆಯಾಗಿವೆ ಎನ್ನಲಾಗಿದ್ದು, ಕೆಲವು ಚಿತ್ರಗಳಲ್ಲಿ ಸೋನಿಯಾ ಗಾಂಧಿ ಅವರನ್ನು ಪುರುಷರ ನಡುವೆ ನೃತ್ಯ ಮಾಡುವ ಹಾಗೂ ಮದ್ಯ ನೀಡುವಂತಹ ಆಕ್ಷೇಪಾರ್ಹ ಭಂಗಿಗಳಲ್ಲಿ ಚಿತ್ರಿಸಲಾಗಿದೆ. ಇದನ್ನು ಮಹಿಳೆಯರ ವಿರುದ್ಧದ ಅವಹೇಳನಕಾರಿ ನಡೆ ಎಂದು ಟೀಕಿಸಲಾಗಿದೆ.
ಈ ಬೆಳವಣಿಗೆಯನ್ನು ಖಂಡಿಸಿರುವ ಭಾರತೀಯ ಯುವ ಕಾಂಗ್ರೆಸ್, ಇದು ರಾಜಕೀಯ ಟೀಕೆಯ ವ್ಯಾಪ್ತಿಗೆ ಬರುವುದಿಲ್ಲ, ಬದಲಾಗಿ ಮಹಿಳೆಯರ ವಿರುದ್ಧದ ಮನಸ್ಥಿತಿಯ ಪ್ರದರ್ಶನ ಎಂದು ಆರೋಪಿಸಿದೆ. ಬಿಜೆಪಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಲೇ ತನ್ನ ಅಧಿಕೃತ ಖಾತೆಗಳಿಂದ ಇಂತಹ ಚಿತ್ರಗಳನ್ನು ಹಂಚಿಕೊಂಡಿರುವುದು ವಿರೋಧಾಭಾಸ ಎಂದು ಟೀಕಿಸಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಕೂಡ ಬಿಜೆಪಿ-ಆರ್ಎಸ್ಎಸ್ ವ್ಯವಸ್ಥೆ ರಾಜಕೀಯವಾಗಿ ಎದುರಿಸಲಾಗದ ಮಹಿಳೆಯರನ್ನು ಮೊದಲು ನಿಂದನೆ, ಬಳಿಕ ವ್ಯಕ್ತಿತ್ವ ಹರಣ ಮತ್ತು ಇದೀಗ ಎಐ ಮೂಲಕ ಅವಮಾನಿಸುವ ಹಂತಕ್ಕೆ ತಲುಪಿದೆ ಎಂದು ಆರೋಪಿಸಿದ್ದಾರೆ. ಮಹಿಳೆಯರ ಗೌರವದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಸಂದರ್ಭದಲ್ಲಿ ಇಂತಹ ಪೋಸ್ಟ್ಗಳು ಬಿಜೆಪಿ ಅಧಿಕೃತ ಖಾತೆಗಳಿಂದ ಬಂದಿರುವುದು ಕಪಟತನ ಎಂದು ಅವರು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಗುಜರಾತ್ ಬಿಜೆಪಿಯ ಅಧಿಕೃತ ಖಾತೆಯಿಂದ ಮಾಡಲಾಗಿದ್ದ ಟ್ವಿಟ್ ಅನ್ನು ಅಳಿಸಿ ಹಾಕಲಾಗಿದೆಯಾದರೂ, ಬಿಜೆಪಿಯ ಟ್ವಿಟ್ ಸ್ಟೀನ್ ಶಾಟ್ ಗಳನ್ನು ಹಾಕಿ ಅನೇಕ ಬಳಕೆದಾರರು ಪಕ್ಷವನ್ನು ಟೀಕಿಸುತ್ತಿದ್ದಾರೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಕುರಿತೂ ಕಾಂಗ್ರೆಸ್ ಪಕ್ಷದ ಕೆಲವು ಅಧಿಕೃತ ಖಾತೆಗಳು ಆಕ್ಷೇಪಾರ್ಹ ರೀತಿಯಲ್ಲಿ ಟ್ವಿಟ್ ಗಳನ್ನು ಹಾಕಿದೆ ಎಂಬ ಆರೋಪವೂ ವ್ಯಕ್ತವಾಗಿದೆ.