ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ತನ್ನ ಶಾಸಕರು ಅಡ್ಡ ಮತದಾನ ಮಾಡಿದ್ದಕ್ಕೆ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದ್ದು, ಬಿ.ವೈ ವಿಜಯೇಂದ್ರ ಮತ್ತು ಆರ್. ಅಶೋಕ್ ಅವ್ರನ್ನ ದೆಹಲಿಗೆ ಬರುವಂತೆ ಸೂಚನೆ ನೀಡಿದೆ. ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅವರು ಜೂನ್ 23 ರಂದು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದು. ಇದರ ನಡುವೆ ಸೋಲಿಗೆ ಯಾರ ತಲೆದಂಡವಾಗುತ್ತೆ ಎಂಬುದನ್ನ ಕಾದು ನೋಡಬೇಕಿದೆ.
ಗುರುವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನ 11 ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದರಿಂದಾಗಿ ಮೈತ್ರಿ ಅಭ್ಯರ್ಥಿ ಸೋತು, ಕಾಂಗ್ರೆಸ್ ನ ಹೆಚ್ಚುವಾರಿ ಅಭ್ಯರ್ಥಿ ವಿನಯ್ ಕುಮಾರ್ ಅವರು ಅಭೂತ ಪೂರ್ವ ಜಯಗಳಿಸಿದ್ದರು. ಇದೀಗ ಇದನ್ನ ಗಂಭಿರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್. ರಾಜ್ಯ ನಾಯಕರ ಮೇಲೆ ಕೆಂಡಾಮಂಡಲವಾಗಿದ್ದು ವರದಿ ನೀಡುವಂತೆ ಸೂಚಿಸಿದೆ.
ಸಮಿತಿ ರಚನೆ
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಇದರ ತನಿಖೆಗಾಗಿ ಹಾಗೂ ತಪ್ಪಿತಸ್ಥರನ್ನು ಗುರುತಿಸಲು ಸಿ.ಟಿ. ರವಿ, ಎನ್. ಮಹೇಶ್ ಮತ್ತು ಮಹೇಶ್ ಟೆಂಗಿನಕಾಯಿ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದೆ. ಈ ಸಮತಿ ಅಡ್ಡ ಮತದಾನ ಮಾಡಿದ ಶಾಸಕರನ್ನ ಗುರುತಿಸಿ ಅವರು ಅಡ್ಡ ಮತದಾನ ಮಾಡಳು ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ.
ಇನ್ನು ಈ ಕುರಿತು ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿದ್ದು "ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಶಾಸಕರು ಅಡ್ಡ ಮತದಾನ ಮಾಡಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆಯನ್ನುಂಟುಮಾಡಿದೆ. ಪಕ್ಷದ ನಿರೀಕ್ಷೆಯಂತೆ ಮತಗಳು ಬೀಳದೆ, 4 ರಿಂದ 5 ಬಿಜೆಪಿ ಶಾಸಕರು ಮತ್ತು 6 ರಿಂದ 7 ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ. ಈ ಕೆಲಸ ಮಾಡಿದ ಶಾಸಕರನ್ನ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವರನ್ನು ಕ್ಷಮಿಸಲಾಗುವುದಿಲ್ಲ. ಈ ನಾಟಕವನ್ನು ಯಾರು ಆಡಿರಬಹುದು ಎಂಬುದರ ಕುರಿತು ನಮಗೆ ಕೆಲವು ಮಾಹಿತಿಯೂ ಇದೆ" ಎಂದು ಅವರು ಹೇಳಿದರು.
ಬಿ.ವೈ ವಿಜಯೇಂದ್ರ ತಲೆದಂಡ ಸಾಧ್ಯತೆ..!
ಬಿ.ವೈ ವಿಜಯೇಂದ್ರರನ್ನ ಬಿಜೆಪಿ ರಾಜ್ಯಧ್ಯಕ್ಷ ಸ್ಥಾನಕ್ಕೆ ನೇಮಿಸಿದ ನಂತರ, ರಾಜ್ಯ ಬಿಜೆಪಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಭಿನ್ನರ ಗುಂಪು ನಿರಂತರವಾಗಿ ವಿಜಯೇಂದ್ರ ಅವರ ಮೇಲೆ ಗಂಭೀರ ಆರೋಪ ಮಾಡುತ್ತ ಬಂದಿದೆ. ಈ ಗುಂಪಿನ ನೇತೃತ್ವ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಹೈಕಮಾಂಡ್ ಪಕ್ಷದಿಂದ ವಜಾಗೊಳಿಸಿದ್ದು. ಪಕ್ಷ ವಿರೋಧಿ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿ ಅನೇಕ ನಾಯಕರಿಗೆ ನೋಟಿಸ್ ಕೂಡ ಕೊಟ್ಟಿತ್ತು. ಆ ಮೂಲಕ ಪ್ರತಿ ಬಾರಿಯು ವಿಜಯೇಂದ್ರ ಅವರ ಬೆನ್ನಿಗೆ ಹೈಕಮಾಂಡ್ ನಾಯಕರು ನಿಂತಿದ್ದರು.
ಆದರೆ ವಿಜಯೇಂದ್ರ ಅವರ ನೇತೃತ್ವದಲ್ಲಿ ಕಳೆದ ವರ್ಷ ನಡೆದ ಚನ್ನಪಟ್ಟಣ, ಶಿಗ್ಗಾವ್ ಮತ್ತು ಸಂಡೂರು ಉಪಚುನಾವಣೆಯ ಸೋಲು ಹಾಗೂ ಕಳೆದ ತಿಂಗಳು ನಡೆದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಯ ಸೋಲು ವಿಜಯೇಂದ್ರ ಅವರ ನಾಯಕತ್ವಕ್ಕೆ ನೇರ ಸವಾಲು ಹಾಕಿದ್ದವು. ಆದರೆ ಇದೀಗ ಸ್ವಂತ ಶಾಸಕರೆ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವುದು ಶಾಸಕರ ಮೇಲಿನ ಹಿಡಿತವನ್ನ ವಿಜಯೇಂದ್ರ ಕಳೆದು ಕೊಂಡಿರುವುದು ಸ್ಪಷ್ಟಪಡಿಸಿದೆ. ಹೀಗಿರುವಾಗ ಬಿ.ವೈ ವಿಜಯೇಂದ್ರ ಅವರ ಕುರ್ಚಿಗೆ ಕಂಟಕ ಬರುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.