ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಕೆಗೆ ಸಂಬಂಧಿಸಿದ ಮಾಹಿತಿ ಇರುವ ಟಿಪ್ಪಣಿ ಪತ್ತೆಯಾಗಿದ್ದು, ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಸರ್ಫರಾಜ್ ಖಾನ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾಲೇಜಿನ ಎಕ್ಸ್ರೇ ವಿಭಾಗದ ಕೊಠಡಿಯಲ್ಲಿ ಬಾಂಬ್ ತಯಾರಿಕೆಗೆ ಸಂಬಂಧಿಸಿದ ಕೈಬರಹದ ಟಿಪ್ಪಣಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಈ ಟಿಪ್ಪಣಿಯಲ್ಲಿ ಕೆಲವು ರಾಸಾಯನಿಕಗಳ ಹೆಸರುಗಳು ಹಾಗೂ ಬಾಂಬ್ ತಯಾರಿಕೆಗೆ ಸಂಬಂಧಿಸಿದ ಮಾಹಿತಿಯಿತ್ತು ಎನ್ನಲಾಗಿದೆ.
ಟಿಪ್ಪಣಿ ಪತ್ತೆಯಾದ ಬಳಿಕ ಕಾಲೇಜು ಆಡಳಿತ ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಟಿಪ್ಪಣಿ ಯಾರಿಗೆ ಸೇರಿದ್ದು ಮತ್ತು ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಸರ್ಫರಾಜ್ ಖಾನ್ ಸೇರಿದಂತೆ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿದ್ಯಾರ್ಥಿಯ ಹಿನ್ನೆಲೆ, ಟಿಪ್ಪಣಿ ಕಾಲೇಜಿಗೆ ಹೇಗೆ ಬಂದಿತು ಹಾಗೂ ಇದರ ಹಿಂದೆ ಬೇರಾವುದೇ ವ್ಯಕ್ತಿಗಳು ಅಥವಾ ಸಂಘಟನೆಗಳ ಸಂಪರ್ಕವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಯೋಧ್ಯೆ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಈ ಟಿಪ್ಪಣಿಯ ನಿಜವಾದ ಉದ್ದೇಶ ಹಾಗೂ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ. ಸದ್ಯಕ್ಕೆ ಸರ್ಫರಾಜ್ ಖಾನ್ ವಿರುದ್ಧದ ಆರೋಪಗಳು ತನಿಖೆಯ ಹಂತದಲ್ಲಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.