ಕೊಲ್ಹಾಪುರ: ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಸುಮಾರು 1,000 ಅಡಿ ಆಳದ ಕಮರಿಗೆ ತಳ್ಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಆರೋಪಿಯ ನಾಟಕ ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಗರ್ಗೋತಿಯ ಶಿವಾಜಿನಗರದ ನಿವಾಸಿ, 25 ವರ್ಷದ ಶ್ರೀಪಾದ್ ದಿನಕರ್ ವಾದರ್ ಬಂಧಿತ ಆರೋಪಿ. 23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ತರನ್ನುಮ್ ಬಶೀರ್ ನಾಯ್ಕ್ ಮೃತ ಯುವತಿ. ಇಬ್ಬರೂ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಮದುವೆ ವಿಚಾರಕ್ಕೆ ಜಗಳ
ಅಕ್ಟೋಬರ್ 9ರಂದು ಶ್ರೀಪಾದ್ ತನ್ನ ಪ್ರೇಯಸಿ ತರನ್ನುಮ್ ಅವರನ್ನು ಸುತ್ತಾಡುವ ನೆಪದಲ್ಲಿ ನೈಕ್ವಾಡಿ ಜಲಪಾತಕ್ಕೆ ಕರೆದೊಯ್ದಿದ್ದ. ಜಲಪಾತದ ಮೇಲ್ಭಾಗಕ್ಕೆ ತಲುಪಿದಾಗ, ತನಗೆ ಬೇರೆ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿದ್ದು, ಮುಂದಿನ ತಿಂಗಳು ವಿವಾಹ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಪ್ರಸ್ತುತ ಸಂಬಂಧವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ತರನ್ನುಮ್ ತಿಳಿಸಿದ್ದಳು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಶ್ರೀಪಾದ್, ಆಕೆಯೊಂದಿಗೆ ಜಗಳವಾಡಿದ್ದಾನೆ. ಬಳಿಕ ಆಕೆಯನ್ನು ಸುಮಾರು 1,000 ಅಡಿ ಆಳದ ಕಮರಿಗೆ ತಳ್ಳಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಘಟನೆಯ ಬಳಿಕ ಆರೋಪಿಯು ತನ್ನ ಕೃತ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾನೆ. ಮರುದಿನ ಭುದರ್ಗಡ್ ಪೊಲೀಸ್ ಠಾಣೆಗೆ ತೆರಳಿ, ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ತರನ್ನುಮ್ ಕಾಲು ಜಾರಿ ಕಮರಿಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ದೂರು ನೀಡಿದ್ದಾನೆ.
ಆದರೆ, ಆತನ ಹೇಳಿಕೆಯಲ್ಲಿ ಅನುಮಾನ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸತತ ವಿಚಾರಣೆಯ ವೇಳೆ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪೊಲೀಸರು ಸುಮಾರು 1,000 ಅಡಿ ಆಳದ ಕಮರಿಯಿಂದ ಯುವತಿಯ ಮೃತದೇಹವನ್ನು ಹೊರತೆಗೆದು, ಕೊಲ್ಹಾಪುರದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಈ ಘಟನೆ ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗೆ ರಾಜಕೀಯ ನಾಯಕರೊಬ್ಬರ ನಂಟಿದೆ ಎಂದು ಮೃತ ಯುವತಿಯ ಕುಟುಂಬ ಆರೋಪಿಸಿದ್ದು, ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದೆ.