Search


ಭಿಕ್ಷುಕಿ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ; ಕುಟುಂಬಸ್ಥರಿಗೆ ಹಣ ಕೊಟ್ಟಿದ್ದಕ್ಕೆ ಸಾರ್ವಜನಿಕರ ಆಕ್ರೋಶ

ಮಂಡ್ಯ: ಭಿಕ್ಷಾಟನೆ ಮಾಡಿ ಜೀನವ ಸಾಗಿಸುತ್ತಿದ್ದ ವೃದ್ದೆಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಮೃತ ವೃದ್ದೆಯ ಮನೆಯಲ್ಲಿ ಬರೋಬ್ಬರಿ 8 ಲಕ್ಷ ನಗದು ಪತ್ತೆಯಾಗಿದೆ. ಈ ಹಣವನ್ನ ವೃದ್ದೆ ಭಿಕ್ಷಾಟನೆ ನಡೆಸಿ ಸಂಪಾದನೆ ಮಾಡಿದ್ದು. ಇದೀಗ ಈ ಹಣವನ್ನ ಆಕೆಯ ಕುಟುಂಬಸ್ಥರು ಹಂಚಿಕೊಂಡಿದ್ದಾರೆ, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಕೇಳಿ ಬಂದಿದ್ದು, ಬದುಕಿದ್ದಾಗ ಕಣ್ಣೆತ್ತಿಯೂ ನೋಡದವರಿಗೆ ಹಣ ಕೊಟ್ಟಿದ್ದ ಸರಿಯಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಮಂಡ್ಯ ನಗರದ (Mandya City) ಗುತ್ತಲು ಬಡಾವಣೆಯಲ್ಲಿ ವಾಸವಾಗಿದ್ದ ವೃದ್ದೆ ನೂರ್‌ ಮನೆಯಲ್ಲಿ ಮೂಟೆಗಟ್ಟಲೆ ನಾಣ್ಯಗಳು ಮತ್ತು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿಟ್ಟಿದ್ದ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ, ಕುಟುಂಬಸ್ಥರ ಆಸರೆ ಇಲ್ಲದೇ ಹಲವು ವರ್ಷಗಳಿಂದ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರು, ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ.ವೃದ್ಧೆಯ ನಿಧನದ ಬಳಿಕ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಂತ್ಯಸಂಸ್ಕಾರದ ನಂತರ ನೂರ್ ವಾಸವಿದ್ದ ಮನೆಗೆ ಹೋಗಿ ಪರಿಶೀಲಿಸಿದಾಗ ಮೂಟೆಗಟ್ಟಲೆ ನಾಣ್ಯಗಳು ಹಾಗೂ ಕರೆನ್ಸಿ ನೋಟುಗಳ ಕಂತೆಗಳು ಪತ್ತೆಯಾಗಿವೆ.

ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಹಣ ಎಣಿಕೆ ಮಾಡಿದ್ದು, ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿರುವುದು ತಿಳಿದುಬಂದಿದೆ. ಬಳಿಕ ಸ್ಥಳೀಯ ಮುಖಂಡರು ಮಾತುಕತೆ ನಡೆಸಿ, ಆ ಹಣವನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.  ವೃದ್ಧೆ ಜೀವಂತವಾಗಿದ್ದಾಗ ಯಾರೊಬ್ಬರೂ ಆಕೆಯನ್ನು ನೋಡಿಕೊಳ್ಳಲಿಲ್ಲ, ಊಟಕ್ಕೂ ಗತಿಯಿಲ್ಲದೆ ಭಿಕ್ಷೆ ಬೇಡಿ ಬದುಕಿದ್ದರು. ಆದರೆ ಸಾವಿನ ನಂತರ ಆಕೆ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಸಂಬಂಧಿಕರು ಹಂಚಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತವಾಗಿದೆ. ಈ ಘಟನೆ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

By Ravikumar - 23-08-2026


Ads in Post