ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬ್ಯಾವರಾ ಪಟ್ಟಣದ 20 ವರ್ಷದ ಯುವಕನೊಬ್ಬ ಕಲುಷಿತಗೊಂಡಿದ್ದ ಅಜ್ಞಾರ್ ನದಿಯನ್ನು ಸ್ವತಃ ಸ್ವಚ್ಛಗೊಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾನೆ. ಯುವಕನ ಪರಿಸರ ಕಾಳಜಿ ಮತ್ತು ನಿರಂತರ ಪರಿಶ್ರಮಕ್ಕೆ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಲಕ್ಷಾಂತರ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಜ್ಞಾರ್ ನದಿ ಪ್ಲಾಸ್ಟಿಕ್ ತ್ಯಾಜ್ಯ, ಕಸದ ರಾಶಿ ಹಾಗೂ ಪಾಚಿಯಿಂದ ಸಂಪೂರ್ಣವಾಗಿ ಕಲುಷಿತಗೊಂಡಿತ್ತು. ನದಿಯ ದುಸ್ಥಿತಿಯನ್ನು ಕಂಡ ಯುವಕ ಸುರೇಂದ್ರ ಸಿಂಗ್ ಚೌಧರಿ, ಯಾರ ಸಹಾಯಕ್ಕೂ ಕಾಯದೆ ಸ್ವತಃ ನದಿಗಿಳಿದು ಸ್ವಚ್ಛತಾ ಕಾರ್ಯ ಆರಂಭಿಸಿದರು.
ಈ ಕಾರ್ಯದಲ್ಲಿ ಯಾವುದೇ ಸರ್ಕಾರಿ ಸಿಬ್ಬಂದಿ, ಯಂತ್ರೋಪಕರಣ ಅಥವಾ ಆಡಳಿತ ಮಂಡಳಿಯ ನೆರವು ಇರಲಿಲ್ಲ. ಒಬ್ಬನೇ ಯುವಕನ ದೃಢಸಂಕಲ್ಪ ಮತ್ತು ಪರಿಸರದ ಮೇಲಿನ ಕಾಳಜಿಯೇ ಈ ಅಭಿಯಾನದ ಪ್ರಮುಖ ಶಕ್ತಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ 'ಬಿಟ್ಟು ತಬಾಹಿ' ಎಂದೇ ಗುರುತಿಸಿಕೊಂಡಿರುವ ಬಿಎಸ್‌ಸಿ ವಿದ್ಯಾರ್ಥಿ ಸುರೇಂದ್ರ ಸಿಂಗ್ ಚೌಧರಿ, ನದಿಯನ್ನು ಕಸದ ತೊಟ್ಟಿಯನ್ನಾಗಿ ಮಾಡಿರುವ ಸಮಾಜದ ಮನಸ್ಥಿತಿಗೆ ಸವಾಲು ಹಾಕುವ ಉದ್ದೇಶದಿಂದ ಈ ಅಭಿಯಾನಕ್ಕೆ ಕೈಹಾಕಿದ್ದಾರೆ.
ಆರಂಭದಲ್ಲಿ ನದಿ ಸ್ವಚ್ಛಗೊಳಿಸಲು ಯಂತ್ರೋಪಕರಣಗಳನ್ನು ಬಳಸಲು ಸುರೇಂದ್ರ ಯೋಚಿಸಿದ್ದರು. ಆದರೆ ಹಣದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ತಮ್ಮ ಬರಿಗೈಗಳನ್ನೇ ನಂಬಿ ನದಿಗಿಳಿದು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ತೆರವುಗೊಳಿಸಲು ಆರಂಭಿಸಿದರು. ಕೇವಲ ಕಸ ತೆಗೆಯುವುದಷ್ಟೇ ಅಲ್ಲದೆ, ಸಂಗ್ರಹಿಸಿದ ಕೆಲವು ತ್ಯಾಜ್ಯವನ್ನು ಬಳಸಿ ಗೊಬ್ಬರ ತಯಾರಿಸುವ ಪ್ರಯತ್ನವನ್ನೂ ಅವರು ಆರಂಭಿಸಿದರು. ಸ್ವಚ್ಛತಾ ಕಾರ್ಯಕ್ಕಾಗಿ ಸುಮಾರು 30 ಸಾವಿರ ರೂಪಾಯಿ ವೆಚ್ಚ ಮಾಡಿ ಅಗತ್ಯ ಉಪಕರಣಗಳು ಹಾಗೂ ಕಸದ ಬುಟ್ಟಿಗಳನ್ನು ಖರೀದಿಸಿದ್ದಾರೆ.
ನಿರಂತರವಾಗಿ ಕೊಳಚೆ ನೀರಿನಲ್ಲಿ ಕೆಲಸ ಮಾಡಿದ್ದರಿಂದ ಸುರೇಂದ್ರ ಅವರ ಕೈ-ಕಾಲುಗಳಿಗೆ ಸೋಂಕು ಕೂಡ ತಗುಲಿತ್ತು. ಅಲ್ಲದೆ, ಸ್ವಚ್ಛತಾ ಕಾರ್ಯದ ವೇಳೆ ಹಾವುಗಳ ಅಪಾಯವನ್ನೂ ಎದುರಿಸಬೇಕಾಯಿತು. ಆದರೂ ಯಾವುದೇ ತೊಂದರೆಗಳಿಗೆ ಹೆದರದೆ ತಿಂಗಳುಗಟ್ಟಲೆ ಅವರು ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮುಂದುವರಿಸಿದರು.
'ವೀಕ್ಷಣೆಗಾಗಿ ನಾಟಕ' ಎಂದ ಟೀಕೆಗಳಿಗೂ ಜಗ್ಗದ ಯುವಕ
ಸುರೇಂದ್ರ ತಮ್ಮ ಸ್ವಚ್ಛತಾ ಕಾರ್ಯದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ಕೆಲವರು ಅವರನ್ನು ಟೀಕಿಸಿದ್ದರು. 'ಹೆಚ್ಚು ವೀಕ್ಷಣೆಗಾಗಿ ನಾಟಕ ಮಾಡುತ್ತಿದ್ದಾನೆ', 'ಹುಚ್ಚ' ಎಂದೂ ಹೀಯಾಳಿಸಿದ್ದರು.
ಆದರೆ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಸುರೇಂದ್ರ, ತಮ್ಮ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿದರು. ಕೊನೆಗೆ ಕಸದ ರಾಶಿಯಿಂದ ತುಂಬಿದ್ದ ನದಿಯನ್ನು ಸ್ವಚ್ಛಗೊಳಿಸಿ, ಅದಕ್ಕೆ ಮರುಜೀವ ನೀಡುವಲ್ಲಿ ಯಶಸ್ವಿಯಾದರು. ಇದೀಗ ಸುರೇಂದ್ರ ಅವರ ನಿಸ್ವಾರ್ಥ ಪರಿಸರ ಸೇವೆಗೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ, ನಟಿ ಚಿತ್ರಾಂಗದಾ ಸಿಂಗ್ ಹಾಗೂ ಹಲವು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತ, ನೆಟ್ಟಿಗರು ಸುರೇಂದ್ರ ಅವರ ಕಾರ್ಯವನ್ನು ಶ್ಲಾಘಿಸುತ್ತಿದ್ದರೂ, ಕೆಲವರು ಆಡಳಿತ ವ್ಯವಸ್ಥೆಯ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. 'ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಸುರೇಂದ್ರ ಉದಾಹರಣೆ' ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, '20 ವರ್ಷದ ವಿದ್ಯಾರ್ಥಿಯೊಬ್ಬ ಬರಿಗೈಯಲ್ಲಿ ನದಿ ಸ್ವಚ್ಛಗೊಳಿಸಬೇಕಾದ ಪರಿಸ್ಥಿತಿ ಏಕೆ?', 'ಆಡಳಿತ ಮಂಡಳಿ ಯಂತ್ರೋಪಕರಣಗಳನ್ನು ಬಳಸಿ ಶಾಶ್ವತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ರೂಪಿಸಬಾರದೇ?' ಎಂದು ಹಲವರು ಪ್ರಶ್ನಿಸಿದ್ದಾರೆ.