Search


ರಾಹುಲ್ ವಿದೇಶದಿಂದ ಬಂದ ಬಳಿಕ ಸಂಪುಟ ವಿಸ್ತರಣೆ; ದೆಹಲಿಗೆ ತೆರಳಲಿರೋ ಸಿದ್ದು-ಡಿಕೆ

ಬೆಂಗಳೂರು: ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿ ತಿಂಗಳು ಕಳೆದರು ಇನ್ನು ಸಚಿವ ಸಂಪುಟ ಮಾತ್ರ ಪೂರ್ಣಗೊಂಡಿಲ್ಲ. ಇದರ ನಡುವೆ ಸಂಪುಟ ವಿಸ್ತರಣೆ ಬಗ್ಗೆ ಸಕಾರಾತ್ಮಕ ಮಾಹಿತಿ ದೊರೆತಿದ್ದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶದಿಂದ ಬಂದ ನಂತರ ಸಂಪುಟ ವಿಸ್ತರಣೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಜುಲೈ 12 ರ ನಂತರ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದ್ದು, ಕಾಂಗ್ರೆಸ್ ನಾಯಕತ್ವದೊಂದಿಗೆ ನಿರ್ಣಾಯಕ ಸಮಾಲೋಚನೆ ನಡೆಸಲಿದ್ದಾರೆ. ಈ ಸಭೆಯು ಸಚಿವರ ಅಂತಿಮ ಪಟ್ಟಿಯನ್ನು ನಿರ್ಧರಿಸುವ ನಿರೀಕ್ಷೆಯಿದ್ದು, ಬಹುನಿರೀಕ್ಷಿತ ಸಂಪುಟ ಸಭೆಯ ಕುರಿತು ವಾರಗಳ ಕಾಲ ಇದ್ದ ಊಹಾಪೋಹಗಳಿಗೆ ಅಂತ್ಯ ಹಾಡಲಿದೆ.

ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಸೇರಿಸಬೇಕಾದ ಏಳರಿಂದ ಎಂಟು ಶಾಸಕರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಈ ಪಟ್ಟಿಯಲ್ಲಿರುವ ಬಹುತೇಕ ನಾಯಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಷ್ಠರಾಗಿದ್ದು, ಪಕ್ಷದೊಳಗಿನ ಅವರ ಬಣಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ.

ಡಿಕೆ. ಶಿವಕುಮಾರ್ ಕೂಡ ಕಾಂಗ್ರೆಸ್ ನಾಯಕತ್ವಕ್ಕೆ ಸಚಿವ ಸಂಪುಟ ಆಕಾಂಕ್ಷಿಗಳಾಗಿರುವ ತಮ್ಮ ಬೆಂಬಲಿಗರ ಪಟ್ಟಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಅವರು ತಮ್ಮ ಬೆಂಬಲಿಗರ ಸೇರ್ಪಡೆಗಾಗಿ ಲಾಬಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕತ್ವಕ್ಕೆ ವಿವಿಧ ಬಣಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸೂಕ್ಷ್ಮ ಹಾಗೂ ಸವಾಲಿನ ಕಾರ್ಯವಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಅನುಭವಿ ಶಾಸಕರನ್ನು ಮಾತ್ರ ಅವಲಂಬಿಸುವ ಬದಲು ಹಲವಾರು ಹೊಸ ಮುಖಗಳನ್ನು ಸೇರಿಸಿಕೊಳ್ಳಲು ಒಲವು ತೋರುತ್ತಿದೆ ಎಂದು ಮೂಲಗಳು ಸೂಚಿಸಿವೆ. ಇದರ ಜೊತೆಗೆ, ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಬಗ್ಗೆಯೂ ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. ಸಂಪುಟ ವಿಸ್ತರಣೆಯ ಸಮಯದಲ್ಲಿ ಎರಡರಿಂದ ಮೂರು ಮಹಿಳಾ ಶಾಸಕರನ್ನು ಸೇರಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಎಲ್ಲಾ ಅಂದುಕೊಂಡಂತೆ ನಡೆದರೆ ಇದೆ ತಿಂಗಳು 20ರ ಒಳಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಬಹುದು ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ

By Ravikumar - 09-07-2026


Ads in Post