Search


ನನ್ನ ಆಪ್ತ ಎಂದ ಮಾತ್ರಕ್ಕೆ ನನ್ನ ವಿರುದ್ಧ ಕೆಲಸ ಮಾಡಬಹುದೇ?

ಪಕ್ಷದ ವಿವಿಧ ಬಣಗಳಿಗೆ ಸೇರಿದ ನಾಯಕರು ಹೈಕಮಾಂಡ್‌ ಗಮನ ಸೆಳೆಯಲು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೆಂದು ಗುರುತಿಸಿಕೊಂಡಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಹಿರಿಯ ನಾಯಕ ಹೆಚ್.ಸಿ.ಮಹದೇವಪ್ಪ ಅವರ ಬೆಂಬಲಿಗರು ಸಮುದಾಯದ ಹೆಸರಿನಲ್ಲಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಮಹದೇವಪ್ಪ ಬೆಂಬಲಿಗರು ‘ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ’ದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಧಾರ್ಮಿಕ ಮುಖಂಡ ಜ್ಞಾನಪ್ರಕಾಶ ಸ್ವಾಮೀಜಿ, “ಮಹದೇವಪ್ಪ ನಿಜವಾದ ಅಂಬೇಡ್ಕರ್‌ವಾದಿ. ಅವರಿಗೆ ಸಚಿವ ಸ್ಥಾನ ನೀಡಬೇಕು” ಎಂದು ಆಗ್ರಹಿಸಿದರು.

ಅಲ್ಲದೆ, ದಲಿತ ಮುಖ್ಯಮಂತ್ರಿ ವಿಚಾರವನ್ನು ಪ್ರಸ್ತಾಪಿಸಿದ ಅವರು, “ದಲಿತ ಸಮುದಾಯವನ್ನು ಕಾಂಗ್ರೆಸ್‌ ನಿರ್ಲಕ್ಷಿಸಿದರೆ 2028ರ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಪಕ್ಷಕ್ಕೆ ಪಾಠ ಕಲಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಜಮೀರ್ ಪರ ಬೆಂಬಲಿಗರ ಒತ್ತಡ

ಇನ್ನೊಂದೆಡೆ, ಜಮೀರ್ ಅಹ್ಮದ್ ಖಾನ್ ಬೆಂಬಲಿಗರು ಸಿದ್ದರಾಮಯ್ಯ ಅವರ ‘ಕಾವೇರಿ’ ನಿವಾಸದ ಮುಂದೆ ಜಮಾಯಿಸಿ, ಜಮೀರ್‌ಗೆ ಸಚಿವ ಸ್ಥಾನ ದೊರಕುವಂತೆ ಹೈಕಮಾಂಡ್‌ ಮೇಲೆ ಒತ್ತಡ ತರಲು ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಜಮೀರ್ ಬೆಂಬಲಿಗರೊಬ್ಬರು ಸಚಿವ ಸ್ಥಾನಕ್ಕಾಗಿ ಮನವಿ ಮಾಡುತ್ತಿದ್ದಾಗ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿರುವುದು ಕಂಡುಬಂದಿದೆ.

“ನನ್ನ ಆಪ್ತ ಎಂದ ಮಾತ್ರಕ್ಕೆ ನನ್ನ ವಿರುದ್ಧ ಕೆಲಸ ಮಾಡಬಹುದೇ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಜಮೀರ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪವನ್ನೂ ಅವರು ಪ್ರಸ್ತಾಪಿಸಿದರೆಂದು ಹೇಳಲಾಗಿದೆ.

By S M Swathi - 12-06-2026


Ads in Post