Search


ನ್ಯೂಸ್‌ ಚಾನಲ್‌ಗಳ TRP ರೇಸ್‌ಗೆ ಬ್ರೇಕ್‌ ಹಾಕಿದ ಕೇಂದ್ರ ಸರ್ಕಾರ ; 4 ವಾರ ನಿರ್ಬಂಧ..!

ನವದೆಹಲಿ : ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಟಿವಿ ಸುದ್ದಿ ವಾಹಿನಿ ನೀಡುವ ಟಿಆರ್‌ಪಿಯನ್ನ 4 ವಾರಗಳ ಕಾಲ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಸಂಸ್ಥೆಗೆ ಕೇಂದ್ರ ಸಚಿವಾಲಯ ಈ ಸೂಚನೆ ನೀಡಿದ್ದು, ಸುದ್ದಿ ವಾಹಿನಿಗಳು ಸಂವೇದನಾತ್ಮಕ ಮತ್ತು ಊಹಾಪೋಹದ ಸುದ್ದಿ ಭಿತ್ತರಿಸುತ್ತಿರುವ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. 

ಸಾಮಾನ್ಯವಾಗಿ ಪ್ರತಿ ವಾರವೂ ಸುದ್ದಿ ವಾಹಿನಿಗಳ ವೀಕ್ಷಕ ವಿವರಣೆ ಪಟ್ಟಿಯನ್ನ BARC ಪ್ರಕಟಿಸುತ್ತದೆ, ಇದರ ಆಧಾರದ ಮೇಲೆ ಸಂಸ್ಥೆಗಳ ಸ್ಥಾನಮಾನ ನಿರ್ಧರಿತವಾಗುತ್ತದೆ, ಆದರೆ ಇತ್ತೀಚೆಗೆ ಕೆಲವು ಸುದ್ದಿ ವಾಹಿನಿಗಳು ಸಂವೇದನಾತ್ಮಕ ಹಾಗೂ ಊಹಾಪೋಹದ ಸುದ್ದಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು. ಇದರಿಂದ ಜನರಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ. ಆದ್ದರಿಂದ ಟಿಆರ್‌ಪಿ (TRP) ಒತ್ತಡ ಕಡಿಮೆಯಾದರೆ ಸುದ್ದಿವಾಹಿನಿಗಳು ಜವಬ್ದಾರಿಯುತ ವರದಿಗಳಿಗೆ ಒತ್ತು ನೀಡುತ್ತವೆ ಎಂದು ಅಭಿಪ್ರಾಯ ಪಟ್ಟಿರುವ ಸಚಿವಾಲಯ ಇಂತಹ ಕ್ರಮಕ್ಕೆ ಮುಂದಾಗಿದೆ.

ಈ ಕಾರಣದಿಂದಾಗಿ ಬಾರ್ಕ್ ಸಂಸ್ಥೆ ಮುಂದಿನ ನಾಲ್ಕು ವಾರಗಳವರೆಗೆ ಸುದ್ದಿ ವಾಹಿನಿಗಳ ವಾರಾಂತ್ಯದ ವೀಕ್ಷಕರ ಅಂಕಿಅಂಶಗಳನ್ನು ಪ್ರಕಟಿಸುವುದಿಲ್ಲ. ಆದರೆ ಮನರಂಜನೆ, ಕ್ರೀಡೆ ಹಾಗೂ ಇತರೆ ವಾಹಿನಿಗಳ ರೇಟಿಂಗ್‌ಗಳನ್ನು ಎಂದಿನಂತೆ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ. ಇದಕ್ಕೂ ಮೊದಲು ಕೂಡ ಸಚಿವಾಲಯ ನಾಲ್ಕು ವಾರಗಳ ಕಾಲ ಟಿಆರ್‌ಪಿ ಪ್ರಕಟಣೆಯನ್ನು ಸ್ಥಗಿತಗೊಳಿಸಿತ್ತು. ಪರಿಸ್ಥಿತಿಯ ಮರುಪರಿಶೀಲನೆ ನಡೆಸಿದ ಅಧಿಕಾರಿಗಳು, ಆರಂಭಿಕ ನಿರ್ಧಾರಕ್ಕೆ ಕಾರಣವಾದ ಅಂಶಗಳು ಇನ್ನೂ ಮುಂದುವರಿದಿರುವುದರಿಂದ ನಿರ್ಬಂಧವನ್ನು ವಿಸ್ತರಿಸುವುದು ಅಗತ್ಯ ಎಂದು ತೀರ್ಮಾನಿಸಿದ್ದಾರೆ.

ಸುದ್ದಿವಾಹಿನಿಗಳ ಮೇಲೆ ಬೀಳುವ ಪರಿಣಾಮವೇನು...!

ಮಾಧ್ಯಮ ವಲಯದ  ತಜ್ಞರ ಪ್ರಕಾರ, ಟಿಆರ್‌ಪಿ ಅಂಕಿಅಂಶಗಳು ಜಾಹೀರಾತು ಹಂಚಿಕೆ ಹಾಗೂ ವಾಹಿನಿಗಳ ಸ್ಥಾನಮಾನ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಈ ತಾತ್ಕಾಲಿಕ ನಿರ್ಬಂಧದಿಂದ ಸುದ್ದಿ ವಾಹಿನಿಗಳ ಜಾಹೀರಾತು ಆದಾಯದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀಳುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ಜಾಹೀರಾತು ಕಂಪನಿಗಳು ಟಿಆರ್‌ಪಿ ಅಂಕಿ ಅಂಶಗಳ ಜೊತೆಗೆ ಇತರೆ ಮಾನದಂಡಗಳನ್ನು ಕೂಡ ಪರಿಗಣಿಸುತ್ತಿದ್ದು, ಮಾಧ್ಯಮ ತಜ್ಞರು ಈ ಕ್ರಮವನ್ನ ಸ್ವಾಗತಿಸಿದ್ದಾರೆ.

ಮತ್ತೊಂದೆಡೆ, ದೀರ್ಘಕಾಲ ಟಿಆರ್‌ಪಿ ಪ್ರಕಟಣೆ ಸ್ಥಗಿತಗೊಳ್ಳುವುದರಿಂದ ಪಾರದರ್ಶಕತೆ ಕಡಿಮೆಯಾಗಬಹುದು ಹಾಗೂ ವಾಹಿನಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಜಾಹೀರಾತುದಾರರು ಮತ್ತು ಹೂಡಿಕೆದಾರರಿಗೆ ಕಷ್ಟವಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ಹೊಸ ಆದೇಶದ ಪ್ರಕಾರ, ಮುಂದಿನ ನಾಲ್ಕು ವಾರಗಳವರೆಗೆ ಅಥವಾ ಸರ್ಕಾರದಿಂದ ಹೊಸ ನಿರ್ದೇಶನ ಹೊರಬರುವವರೆಗೆ ಸುದ್ದಿ ವಾಹಿನಿಗಳ ವೀಕ್ಷಕರ ರೇಟಿಂಗ್‌ಗಳು ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ.
 

By Ravikumar - 05-06-2026


Ads in Post